ರಾ. ಹೆದ್ದಾರಿ-169ರ ಮಿಜಾರು ಬೆಳ್ಳೆಚ್ಚಾರಿನಲ್ಲಿ ಸುರಕ್ಷತೆಗಾಗಿ ಮೇಲ್ಸೇತುವೆಗೆ ಗ್ರಾಮಸ್ಥರ ಆಗ್ರಹ: ಸಮಸ್ಯೆ ಬಗ್ಗೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದ್ದರೂ ಮೌನ

ರಾ. ಹೆದ್ದಾರಿ-169ರ ಮಿಜಾರು ಬೆಳ್ಳೆಚ್ಚಾರಿನಲ್ಲಿ ಸುರಕ್ಷತೆಗಾಗಿ ಮೇಲ್ಸೇತುವೆಗೆ ಗ್ರಾಮಸ್ಥರ ಆಗ್ರಹ: ಸಮಸ್ಯೆ ಬಗ್ಗೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದ್ದರೂ ಮೌನ


ಮೂಡುಬಿದಿರೆ: ಮಂಗಳೂರು-ಕಾಕ೯ಳ ರಾಷ್ಟ್ರೀಯ ಹೆದ್ದಾರಿ–169 ಹಾದು ಹೋಗುವ ಮೂಡುಬಿದಿರೆ ವ್ಯಾಪ್ತಿಯ ಮಿಜಾರು ಬೆಳ್ಳೆಚ್ಚಾರು  ಜಂಕ್ಷನ್ ನ ವಿಸ್ತರಣಾ ಕಾಮಗಾರಿ ನಡೆಯುತ್ತಿರುವಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಕಾಡುತ್ತಿದ್ದು ಸಾವ೯ಜನಿಕರು ಆತಂಕ್ಕಕ್ಕೀಡಾಗಿದ್ದಾರೆ ಈ ಬಗ್ಗೆ ವಷ೯ದ ಹಿಂದೆ ಶಾಸಕರು, ಸಂಸದರು, ರಾ. ಹೆ. ಇಲಾಖೆಯ ಅಧಿಕಾರಿಗಳಿಗೆ ಇಮೇಲ್ ಮೂಲಕ ಮನವಿ ಸಲ್ಲಿಕೆಯಾಗಿದ್ದರೂ ಮೌನ ವಹಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. 


ಬೆಳ್ಳೆಚ್ಚಾರು ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳು ಅಸಮಪ೯ಕ ರೀತಿಯಲ್ಲಿ ನಡೆದಿರುವುದರಿಂದ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ಇರುವುದರಿಂದ ವಿದ್ಯಾಥಿ೯ಗಳು ರಸ್ತೆ ದಾಟಲು ಕಷ್ಟ ಸಾಧ್ಯವಾಗಿದೆ. ಹಿನ್ನೆಲೆಯಲ್ಲಿ ಮೇಲ್ಸೇತುವೆ, ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಸುರಕ್ಷಿತ ತಿರುವು ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.


ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಸುಧಾಕರ್ ಪೂಂಜಾ ಈ ಕುರಿತು ಮಾಹಿತಿ ನೀಡಿ, ಇತ್ತೀಚೆಗೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಎರಡೂ ಕಾಲುಗಳು ಮುರಿದು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಇಬ್ಬರು ವಿದ್ಯಾರ್ಥಿಗಳೂ ಅಪಘಾತಕ್ಕೀಡಾಗಿದ್ದಾರೆ. ವಾಹನಗಳ ದಟ್ಟ ಸಂಚಾರದಿಂದ ಪಾದಚಾರಿಗಳಿಗೆ ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು  ಸುರಕ್ಷತೆಯನ್ನು ಗಮನದಲ್ಲಿಟ್ಟು  ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.


ಇರುವೈಲು ರಸ್ತೆಯ ಸಮೀಪ ಹೊಸಬೆಟ್ಟು ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳಿರುವುದರಿಂದ ಈ ಭಾಗದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂಚರಿಸುತ್ತಾರೆ. ಆದರೆ ಮಳೆಗಾಲದಲ್ಲಿ ಎರಡರಿಂದ ಮೂರು ಅಡಿ ನೀರು ರಸ್ತೆಯಲ್ಲೇ ನಿಲ್ಲುವುದರಿಂದ ಕೃತಕ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೆದ್ದಾರಿ ನಿರ್ಮಾಣದ ವೇಳೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ಮಳೆನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರು ತಮ್ಮ ಖಾಸಗಿ ಜಾಗದಲ್ಲಿ ಸ್ವಂತ ವೆಚ್ಚದಲ್ಲಿ ಪೈಪ್ ಅಳವಡಿಸಿಕೊಂಡಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ದೂರಿದ್ದಾರೆ.

ಬೆಳ್ಳೆಚ್ಚಾರು ಜಂಕ್ಷನ್‌ನಿಂದ ಇರುವೈಲು, ಕೊನ್ನೆಪದವು, ಮಜ್ಜಿಗುರಿ, ಪೂಪಾಡಿ, ಎಡಪದವು ಹಾಗೂ ಶಾಸ್ತವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಾವಿರಾರು ಜನರ ದೈನಂದಿನ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದೆ. ಅಲ್ಲದೆ, ಈ ಭಾಗದಲ್ಲಿರುವ ಆರುಕ್ಕೂ ಹೆಚ್ಚು ಜಲ್ಲಿಕಲ್ಲು ಉದ್ದಿಮೆಗಳಿಗೆ ಸೇರಿದ 25ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳು ಪ್ರತಿದಿನ ನೂರಕ್ಕೂ ಹೆಚ್ಚು ಟ್ರಿಪ್‌ಗಳನ್ನು ನಡೆಸುತ್ತಿರುವುದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.

ಪ್ರಸ್ತುತ ಹೆದ್ದಾರಿ ವಿನ್ಯಾಸದ ಪ್ರಕಾರ ಮೂಡುಬಿದಿರೆ ಹಾಗೂ ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಇರುವೈಲು ರಸ್ತೆಗೆ ಸುರಕ್ಷಿತವಾಗಿ ತಿರುಗಲು ಅವಕಾಶವಿಲ್ಲ. ಇದರಿಂದ ವಾಹನಗಳು ಸುಮಾರು ಎರಡು ಕಿಲೋಮೀಟರ್ ಸುತ್ತುಬಳಸಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ತಿಳಿಸಿದೆ. ಈ ಕುರಿತು ಈಗಾಗಲೇ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಬಡಗ ಎಡಪದವು ಗ್ರಾಮ ಪಂಚಾಯಿತಿ ವತಿಯಿಂದಲೂ ಅಧಿಕೃತ ಮನವಿ ಸಲ್ಲಿಸಬೇಕೆಂದು ಎಂ. ಸುಧಾಕರ ಪೂಂಜ ಕೋರಿದ್ದಾರೆ.

ಸ್ಥಳೀಯರಾದ ರಾಮಕೃಷ್ಣ ಶೆಟ್ಟಿ ಮಾತನಾಡಿ  ಮಿಜಾರು ಬೆಳ್ಳೆಚ್ಚಾರು ಹಳೆಯ ಚೆಕ್‌ಪೋಸ್ಟ್, ಪ್ರಸ್ತುತ ಕೊಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಆಳ್ವಾಸ್ ಮೆಡಿಕಲ್ ಕಾಲೇಜು ಎದುರಿನ ಭಾಗದಲ್ಲಿ ರಸ್ತೆ ದಾಟಲು ಸುರಕ್ಷಿತ ವ್ಯವಸ್ಥೆ ಇಲ್ಲದ ಕಾರಣ ಒಂದೇ ವಾರದಲ್ಲಿ ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು  ತಿಳಿಸಿದ್ದಾರೆ.

ಹರಿಮಿನಾಕ್ಷಿ ದೋಟದ ಸುರೇಶ್ ಶೆಟ್ಟಿ,  ಹರಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ, ರಿಯಾಜ್, ಹಕೀಮ್, ಮನ್ಸೂರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಮಾನವ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಹೆದ್ದಾರಿ ಸಮಸ್ಯೆಗಳಿಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article