ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಸಾಧಾರಣ ಮಳೆ: ಮುಂಬರುವ ದಿನಗಳಲ್ಲಿ ಭಾರಿ ಮಳೆ ಕೊರತೆಯ ಆತಂಕ
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಹಲವೆಡೆ ಬುಧವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರ, ಸುರತ್ಕಲ್, ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಬೆಳಗ್ಗೆ ಕೆಲವು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದ್ದು, ವಾತಾವರಣ ತಂಪಾಗಿದೆ.
ಹವಾಮಾನ ಇಲಾಖೆಯ ವರದಿಗಳ ಪ್ರಕಾರ, ಮುಂದಿನ 2 ರಿಂದ 3 ದಿನಗಳ ಕಾಲ ಕರಾವಳಿ ತೀರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇನ್ನುಳಿದ ಗ್ರಾಮಿಣ ಭಾಗಗಳಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರಲಿದ್ದು, ದಿನದ ಅವಧಿಯಲ್ಲಿ ಒಂದೆರಡು ಬಾರಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಮುನ್ಸೂಚನೆಯಂತೆ, ರಾಜ್ಯದ ಕರಾವಳಿ ತೀರದ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂನ್ 21ರ ತನಕವೂ ಇದೇ ರೀತಿಯ ಮಿಶ್ರ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ.
ರಾಜ್ಯದಲ್ಲಿ ಮುಂಗಾರು ಪ್ರವೇಶ ಪಡೆದಿದ್ದರೂ, ಜಾಗತಿಕ ಹವಾಮಾನ ವೈಪರೀತ್ಯವಾದ ‘ಎಲ್ ನಿನೋ’ ಸಕ್ರಿಯವಾಗಿರುವುದು ತೀವ್ರ ಆತಂಕ ಮೂಡಿಸಿದೆ. ಎಲ್ ನಿನೋ ಆರಂಭವಾಗಿರುವ ಪರಿಣಾಮವಾಗಿ, ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಭಾರಿ ಮಳೆಯ ಕೊರತೆ ಉಂಟಾಗಲಿದೆ ಎಂದು ಹವಾಮಾನ ವರದಿಗಳು ಎಚ್ಚರಿಸಿವೆ. ಕರಾವಳಿಯಲ್ಲಿ ಸದ್ಯಕ್ಕೆ ಸಾಧಾರಣ ಮಳೆಯಾಗುತ್ತಿದ್ದರೂ, ಎಲ್ ನಿನೋ ಪ್ರಭಾವದಿಂದಾಗಿ ಮುಂದಿನ ತಿಂಗಳುಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ.