ಭಾರತದ ಸಾಂಸ್ಕೃತಿಕ ಪರಂಪರೆಗೆ ದೊರೆತ ಗೌರವ: ಬ್ರಿಜೇಶ್ ಚೌಟ
Sunday, June 21, 2026
ಮಂಗಳೂರು: 2014ರಲ್ಲಿ ಪ್ರಾರಂಭಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಜೀವನ ಶೈಲಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಗೌರವವಾಗಿದೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಯುತ ಜೀವನವನ್ನು ಹೇಗೆ ಪಡೆಯಬೇಕು ಎಂಬುದನ್ನು ಭಾರತವು ಜಗತ್ತಿಗೆ ಕಲಿಸಿದೆ. ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯೋಗದ ಮಹತ್ವವು ಎಷ್ಟು ಅಗತ್ಯವಾಗಿದೆ ಎಂದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಜಿಲ್ಲಾ ಸರ್ಜನ್ ಡಾ. ಶಿವಪ್ರಕಾಶ್, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿ ರವಿಶಂಕರ್, ಎಎಸ್‌ಪಿ ಅನಿಲ್ ಕುಮಾರ್, ಬ್ರಹ್ಮಕುಮಾರಿ ಅಂಬಿಕಾ ಉಪಸ್ಥಿತರಿದ್ದರು.
ಯೋಗದಲ್ಲಿ ವಿಶ್ವ ದಾಖಲೆ ಮಾಡಿದ ಕಡಬ ತಾಲೂಕಿನ ಏನಕಲ್ಲು ನಿವಾಸಿ, 6ನೇ ತರಗತಿ ವಿದ್ಯಾರ್ಥಿ ಅಕ್ಷಯ ಬಿ.ಎಂ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಣಿಕರ್ಣಿಕಾ ಸ್ವಾಗತಿಸಿದರು. ನಂತರ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಿತು.


