ಪ್ರವಾಕ್ಯ ಫೌಂಡೇಶನ್ ವತಿಯಿಂದ "ಫನ್ ವಿತ್ ಫೈನಾನ್ಷಿಯಲ್ಸ್" ಕಾರ್ಯಕ್ರಮ ಯಶಸ್ವಿ
Saturday, June 20, 2026
ಮೂಡುಬಿದಿರೆ: ಯುವಜನರಲ್ಲಿ ಹಣಕಾಸು ಶಿಕ್ಷಣದ ಅರಿವು ಮೂಡಿಸುವ ಉದ್ದೇಶದಿಂದ "ಪ್ರವಾಕ್ಯ ಫೌಂಡೇಶನ್" ವತಿಯಿಂದ ರೋಟರಿ ಪದವಿ ಪೂರ್ವ ಕಾಲೇಜಿನಲ್ಲಿ "ಫನ್ ವಿತ್ ಫೈನಾನ್ಷಿಯಲ್ಸ್"ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 124 ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಪಠ್ಯಪುಸ್ತಕದಲ್ಲಿರುವ ಹಣಕಾಸು ಪರಿಕಲ್ಪನೆಗಳನ್ನು ನೈಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಆಟಗಳು, ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಕಲಿಕೆಯ ಮೂಲಕ ಅರಿತುಕೊಂಡರು.
"ಪ್ರವಾಕ್ಯ ಫೌಂಡೇಶನ್" ಯುವಜನರಲ್ಲಿ ಸಾರ್ವಜನಿಕ ಭಾಷಣ ಕೌಶಲ್ಯ, ನಾಯಕತ್ವ, ಶಿಕ್ಷಣ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಾಗಿದ್ದು, ಕಲಿಕೆಯನ್ನು ಅನುಭವದೊಂದಿಗೆ ಜೋಡಿಸಿ ಸಮಾಜಕ್ಕೆ ಜವಾಬ್ದಾರಿಯುತ ಮತ್ತು ಸಮರ್ಥ ಯುವ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರವಾಕ್ಯ ಫೌಂಡೇಶನ್‌ನ ಸಂಸ್ಥಾಪಕ ಜೋಶಿತ್ ಶೆಟ್ಟಿ, ಸಹ-ಸಂಸ್ಥಾಪಕ ಶ್ರೀಕಂಠ ರಾವ್ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಹಣಕಾಸು ಸಾಕ್ಷರತೆಯನ್ನು ಸರಳ ಮತ್ತು ಮನರಂಜನಾತ್ಮಕ ರೀತಿಯಲ್ಲಿ ಪರಿಚಯಿಸುವ ವಿನೂತನ ಪ್ರಯತ್ನವಾಗಿ ಮೆಚ್ಚುಗೆಗೆ ಪಾತ್ರವಾಯಿತು.
ಕಾಲೇಜಿನ ಉಪ ಪ್ರಾಂಶುಪಾಲರಾದ ವೈಶಾಲಿ ಸನಿಲ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
