ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ಮಾದಕ ವಸ್ತುಗಳ ದುರುಪಯೋಗದ ಕುರಿತು ಜಾಗೃತಿ ಕಾರ್ಯಕ್ರಮ
Monday, June 22, 2026
ಪುತ್ತೂರು: ಸಂತ ಫಿಲೋಮಿನಾ ಪ.ಪೂ. ಕಾಲೇಜು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ಉಪವಿಭಾಗದ ಪೊಲೀಸ್ ಠಾಣೆಗಳು ಹಾಗೂ ಸಿಐಪಿ-ಐಆರ್‌ಸಿಎ, ಫಾದರ್ ಪತ್ರಾವೊ ಆಸ್ಪತ್ರೆ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರುಪಯೋಗದ ಕುರಿತು ಜಾಗೃತಿ ಕಾರ್ಯಕ್ರಮವು ಜೂ.22 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಫಾ. ಪತ್ರಾವೊ ಆಸ್ಪತ್ರೆಯ ಸಿಐಪಿ-ಐಆರ್‌ಸಿಎ ಯ ಕೌನ್ಸಿಲರ್ ಚಂದನ್ ಮಾತನಾಡಿ, ಇಂದು ಅನೇಕ ಯುವಕರು ಮಾದಕ ವಸ್ತುಗಳ ಬಗ್ಗೆ ಕುತೂಹಲ ಹೊಂದುತ್ತಿದ್ದಾರೆ. ಅದು ಅವರನ್ನು ವ್ಯಸನದತ್ತ ಕೊಂಡೊಯ್ಯಬಹುದು ಎನ್ನುವ ಕಲ್ಪನೆ ಅವರಿಗೆ ಇಲ್ಲದಿರುವುದು ನಿಜವಾದ ದುರಂತ. ಸಕಾರಾತ್ಮಕ ಬದಲಾವಣೆಗಳು ವಿದ್ಯಾರ್ಥಿ ಜೀವನದಲ್ಲಿಯೇ ಪ್ರಾರಂಭವಾಗಬೇಕು. ಹಾನಿಕಾರಕ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಬದಲು ಕ್ರೀಡೆ ಮತ್ತು ಇತರ ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಾದಕ ವಸ್ತುಗಳ ದುರುಪಯೋಗದ ದುಷ್ಪರಿಣಾಮಗಳನ್ನು ವಿವರಿಸಿದ ಅವರು, ಮಾದಕ ವಸ್ತುಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತವೆ ಮತ್ತು ದೇಹದ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಮತ್ತು ಆರೋಗ್ಯಕರ ಮತ್ತು ಯಶಸ್ವಿ ಜೀವನವನ್ನು ನಡೆಸಲು ಸಹಾಯ ಮಾಡುವ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಪುತ್ತೂರು ಉಪವಿಭಾಗದ ಪೊಲೀಸ್ ನಿರೀಕ್ಷಕ ಜಾನ್ಸನ್ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ದುರುಪಯೋಗದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಜಾಗೃತರಾಗಿರಬೇಕು ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದೆ. ಈ ಅಪಾಯಕ್ಕೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಮಾದಕ ವಸ್ತುಗಳ ಸೇವನೆಯು ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ ಮತ್ತು ಒಬ್ಬರ ಆರೋಗ್ಯ, ಭವಿಷ್ಯ ಮತ್ತು ಕುಟುಂಬ ಜೀವನವನ್ನು ಹಾಳುಮಾಡುವ ಹಾನಿಕಾರಕ ಅಡ್ಡಪರಿಣಾಮಗಳಿಗೆ ಮಾತ್ರ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.


