ಮಾನ್ಯತೆ ಇಲ್ಲದ ಶಾಲೆಯಲ್ಲಿ ಸ್ವರೂಪ ಶಿಕ್ಷಣ-ಮಕ್ಕಳ ಭವಿಷ್ಯಕ್ಕೆ ಕುತ್ತು: ಆರೋಪ

ಮಾನ್ಯತೆ ಇಲ್ಲದ ಶಾಲೆಯಲ್ಲಿ ಸ್ವರೂಪ ಶಿಕ್ಷಣ-ಮಕ್ಕಳ ಭವಿಷ್ಯಕ್ಕೆ ಕುತ್ತು: ಆರೋಪ

ಪುತ್ತೂರು: ಪೆರ್ನಾಜೆಯ ಸೀತಾರಾಘವ ಅನುದಾನಿತ ಶಾಲೆ ಕಳೆದ 60 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಕಳೆದ 3 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿತ್ತು. ಆದರೆ ಇದೀಗ ಈ ಮುಚ್ಚಲಾದ ಶಾಲೆಯಲ್ಲಿ ಅನುಮತಿ ರಹಿತವಾಗಿ ಸ್ವರೂಪ ಹೆಸರಲ್ಲಿ ತರಬೇತಿ-ಶಿಕ್ಷಣ ನಡೆಸಲಾಗುತ್ತಿದೆ. ಇದರ ಬಗ್ಗೆ ತಕ್ಷಣ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವಂತೆ ಸಾಮಾಜಿಕ ಮುಂದಾಳು ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ. 

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, 8 ರಿಂದ ಪಿಯುಸಿ ತನಕ ಇಲ್ಲಿ ತರಗತಿಗಳು ನಡೆಯುತ್ತಿದ್ದು, ಈಗ ಶಿಕ್ಷಣ ಇಲಾಖೆ ಇದರ ಮಾನ್ಯತೆಯನ್ನು ರದ್ದು ಮಾಡಿದೆ. ಈ ಶಾಲಾ ಕಟ್ಟದ ಜಾಗ ಅರಣ್ಯ ಇಲಾಖೆಯ ರಕ್ಷಿತಾರಣ್ಯ ಭಾಗಕ್ಕೆ ಸೇರಿದೆ. 1966ರಲ್ಲಿ ಅರಣ್ಯ ಇಲಾಖೆ ಶಾಲಾ ಉದ್ದೇಶಕ್ಕಾಗಿ ಈ ಜಾಗವನ್ನು ನೀಡಿತ್ತು. ಇಂದಿಗೂ ಶಾಲಾ ಅಡಿಸ್ಥಳ ರಕ್ಷಿತಾರಣ್ಯದ ಭಾಗವಾಗಿಯೇ ದಾಖಲೆಗಳಲ್ಲಿ ಉಳಿದಿದೆ. 

ಇಲ್ಲಿ ಬೇರೆ ಯಾವುದೇ ಶಾಲೆಗಳನ್ನು ನಡೆಸಲು ಅವಕಾಶ ಇಲ್ಲ. ಅಲ್ಲದೆ ಶಿಕ್ಷಣ ಇಲಾಖೆಯ ಸ್ಯಾಟ್ಸ್ ಮತ್ತು ಡೈಸ್ ಕೋಡ್ ಇಲ್ಲದಿರುವ ಮುಚ್ಚಿದ ಶಾಲೆಯಾಗಿದೆ. 

ಇಲ್ಲಿ ಸ್ವರೂಪ ಶಿಕ್ಷಣ ಸಂಸ್ಥೆ ತನ್ನ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಡಿಡಿಪಿಐ ಅವರಿಗೂ ತಿಳಿಸಲಾಗಿದೆ. ಈ ಹಿಂದಿನ ಶಿಕ್ಷಣಾಧಿಕಾರಿ ಅವರು ಹೋಗಿ ಸ್ಥಳಪರಿಶೀಲನೆ ಮಾಡಿದ್ದಾರೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಸ್ವರೂಪ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಸೇರಿಸುತ್ತಿರುವ ಪೋಷಕರು ಎಚ್ಚರವಾಗಬೇಕು. ಯಾವುದೇ ಮಾನ್ಯತೆ ಇಲ್ಲದ ವ್ಯವಸ್ಥೆಯಲ್ಲಿ ನಿಮ್ಮ ಮಕ್ಕಳ ಬದುಕು ಹಾಳಾಗಬಾರದು. ಈ ನಿಟ್ಟಿನಲ್ಲಿ ಜಾಗ್ರತೆ ವಹಿಸುವುದು ಅವಶ್ಯಕ ಎಂದು ಅವರು ತಿಳಿಸಿದರು. 

ಪ್ರಮುಖರಾದ ತಾರಾನಾಥ್, ಅನ್ವರ್ ಖಾಸಿಂ, ಗಂಗಾಧರ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article