ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ‘ಆರೋಗ್ಯಕರ ಮನಸ್ಸು ಮತ್ತು ಉಜ್ವಲ ಭವಿಷ್ಯ’: ಕಾರ್ಯಗಾರ
Wednesday, June 17, 2026
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲ ರಕ್ಷಣಾ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಆರೋಗ್ಯಕರ ಮನಸ್ಸು ಮತ್ತು ಉಜ್ವಲ ಭವಿಷ್ಯ’ದ ಕುರಿತು ಕಾರ್ಯಗಾರವು ಜೂನ್ 16 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಉಪ ವಿಭಾಗದ ಅಬಕಾರಿ ನಿರೀಕ್ಷಕಿ ಜೋಸ್ಲಿನ್ ಫೆರ್ನಾಂಡಿಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿಗೆ ಕಠಿಣ ಪರಿಶ್ರಮ ಅವಶ್ಯಕವಾಗಿದ್ದು, ಇದಕ್ಕೆ ಆರೋಗ್ಯಕರ ಮನಸು ಅತ್ಯಂತ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಹೆತ್ತವರ ತ್ಯಾಗವನ್ನು ನೆನಪಿಸಿಕೊಂಡಾಗ, ಮನಸು ಕೆಟ್ಟ ಕಾರ್ಯದ ಕಡೆಗೆ ಹರಿಯುವುದಿಲ್ಲ. ಪೌಷ್ಟಿಕಾಂಶ ಉಳ್ಳ ಆಹಾರ ಸೇವನೆ, ಧನಾತ್ಮಕ ಚಿಂತನೆಗಳು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯಕರ ಮನಸನ್ನು ಬೆಳೆಸಿಕೊಳ್ಳಬಹುದು. ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ವಿದ್ಯಾರ್ಥಿಗಳು ಮಾದಕ ದ್ರವ್ಯದ ವ್ಯಸನಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮಾನಸಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಹದಿಹರೆಯದಲ್ಲಿ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು. ಒತ್ತಡ ರಹಿತ ವಾತಾವರಣ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸಿದರು.
ವೇದಿಕೆಯಲ್ಲಿ ಬಾಲ ರಕ್ಷಣಾ ಘಟಕದ ನಿರ್ದೇಶಕರಾದ ಡಾ. ಆಶಾ ಸಾವಿತ್ರಿ, ರಾಮ್ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕರಾದ ರಾಮ್ ನಾಯ್ಕ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಗೌತಮ್ ವಂದಿಸಿ, ಅಮಲ್ ಕಾರ್ಯಕ್ರಮ ನಿರೂಪಿಸಿದರು.

