ನಿದ್ದೆಯಿಂದ ಎಚ್ಚೆತ್ತ ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರದ ರೆಂಬೆ ತೆರವು
ಮಳೆಗೆ ಮುನ್ನ ಮುಂಜಾಗ್ರತಾಕ್ರಮವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗುತ್ತಿದೆ.ಅಲ್ಲಿ ಅರಣ್ಯ, ಮೆಸ್ಕಾಂ ಅಧಿಕಾರಿಗಳು ಹಾಜರಿರುತ್ತಾರೆ. ಈ ಸಂದರ್ಭ ಮುನ್ನಚ್ಚರಿಕಾ ಕ್ರಮವಾಗಿ ರಸ್ತೆ ಬದಿಯಲ್ಲಿನ ಅಪಾಯಕಾರಿ ಮರಗಳ ರೆಂಬೆ ಅಥವಾ ಮರವನ್ನು ತೆರವುಗೊಳಿಸುವ ಕುರಿತು ನಿರ್ದೇಶನ ನೀಡಲಾಗುತ್ತದೆ.
ಮೇಲಾಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಇಂತಹ ಮಹತ್ವದ ನಿರ್ದೇಶನ, ಸೂಚನೆ, ತಾಕೀತು ಆ ಸಮಯಕ್ಕಷ್ಠೆ ಸೀಮಿತವಾಗುತ್ತದೆ ಹೊರತುಕಾರ್ಯರೂಪಕ್ಕೆ ಬರುವುದೇ ಇಲ್ಲ ಎಂಬುದು ಕಲ್ಲಟ್ಟಿಯಲ್ಲಾದ ಘಟನೆಯಿಂದ ಮತ್ತೊಮ್ಮೆ ಸಾಭೀತಾಗಿದೆ.
ಇದೀಗ ಕಲ್ಲಟ್ಟಿಯಲ್ಲಾದ ಘಟನೆಯ ಬಳಿಕ ಸಾರ್ವಜನಿಕ ಬಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಳೆಗೆ ಮುನ್ನ ಅಪಾಯಕಾರಿಗಳ ಮರಗಳ ಅಥವಾ ರೆಂಬೆಗಳನ್ನು ಕತ್ತರಿಸಬೇಕಾದ ಅರಣ್ಯ ಇಲಾಖೆ ಈಗ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ.
ಇದೀಗ ಬಿ.ಸಿ.ರೋಡ್, ಬಂಟ್ವಾಳ ಸಹಿತ ಹಲವೆಡೆ ಮಕ್ಕಳ ಹಾಗೂ ಪ್ರಯಾಣಿಕರ ಪ್ರಾಣಕ್ಕೆರವಾಗಬಹುದಾದ ಅಪಾಯಕಾರಿ ಮರಗಳ ರೆಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆವರಣದಲ್ಲಿ ದೊಡ್ಡ ಮರವೊಂದು ಗೆಲ್ಲು ಚಾಚಿಕೊಂಡು ನಿಂತಿದ್ದು ಅದನ್ನು ಕಡಿಯಲಾಗಿದೆ. ಅದರ ಸಮೀಪವಿರುವ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಬೃಹತ್ ಮರವೊಂದು ಇಡೀ ರಸ್ತೆಯನ್ನೇ ಆವರಿಸಿಕೊಂಡಿತ್ತು. ಇದೀಗ ಆ ಮರದ ಗೆಲ್ಲುಗಳನ್ನು ಕಡಿಯಲಾಗಿದ್ದು, ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಬಂಟ್ವಾಳ ಅರಣ್ಯ ಇಲಾಖೆ ಶನಿವಾರ ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿತು.