ಪುತ್ತೂರು ವಿದ್ಯಾರ್ಥಿ ಹಿತರಕ್ಷಣ ಸಮಿತಿಯಿಂದ ಪ್ರತಿಭಟನೆ: ವಿದ್ಯಾರ್ಥಿಗಳಿಂದ ‘ಹೊಸಸಮಾಜ’ದ ಕಾಯಕ-ರಾಘವೇಂದ್ರ ಹಾಲ್ಕೆರೆ
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಹಾಲ್ಕೆರೆ ಅವರು ಮಾತನಾಡಿ, ನೀಟ್ ಹಗರಣ 21 ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಬಸವಣ್ಣ ಬುದ್ಧ ಗಾಂಧಿ ಆಶಯಗಳನ್ನು ಮುಂದಿಟ್ಟುಕೊಂಡು ನಮ್ಮ ಧ್ವನಿಯನ್ನು ದೆಹಲಿಗೆ ಮುಟ್ಟಿಸಬೇಕು. ಅನ್ಯಾಯವಾದರೂ ಮೌನವಾಗಿರುವುದು ಪ್ರಭುತ್ವದ ಸಂಕೇತ. ಆದರೆ ಇಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ಇದನ್ನು ತಡೆಯಬೇಕಾದರೆ ವಿದ್ಯಾರ್ಥಿ ಸಮುದಾಯ ಶಾಂತಿಯುತವಾಗಿ ಸಿಡಿದೇಳಬೇಕು. ಹೊಸ ಸಮಾಜ ಕಟ್ಟುವ ಕಾಯಕಕ್ಕೆ ಮುಂದಡಿ ಇಡಬೇಕು ಎಂದರು.
ಸಿಐಟಿಯು ಮುಖಂಡ ಬಿ.ಎಂ.ಭಟ್ ಅವರು ಮಾತನಾಡಿ, ಬಿ.ಸಿ ರೋಡಿನಲ್ಲಿ ಯುವತಿಯನ್ನು ಹತ್ಯೆ ಮಾಡಿದ ಆರೋಪಿಗೂ ಕೇಂದ್ರದ ಶಿಕ್ಷಣ ಸಚಿವಗೂ ಯಾವುದೇ ವ್ಯತ್ಯಾಸ ಇಲ್ಲ. ಮೋದಿ ಆಳ್ವಿಕೆಯಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ರೈತರ ಮೇಲೆ ಗೋಲಿಬಾರ್, ವಿದ್ಯಾರ್ಥಿಗಳಿಗೆ ಲಾಠಿ ಏಟು. ಪ್ರಶ್ನಿಸಿದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಹಿಂದೆ ಮೋದಿ ಹೇಳಿದರು ಎಂದು ಗಂಟೆ ಬಾರಿಸಿದ್ದೇವೆ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗಲೂ ಗಂಟೆಯನ್ನೇ ಬಾರಿಸಬೇಕಾ ಎಂದು ಪ್ರಶ್ನಿಸಿದ ಅವರು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸದಿದ್ದರೆ ಇಡೀ ವಿದ್ಯಾರ್ಥಿ ಸಮುದಾಯವೇ ಎದ್ದು ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಸೂತ್ರಬೆಟ್ಟು ಜಗನ್ನಾಥ ರೈ ಅವರು ಮಾತನಾಡಿ, ಇದೀಗ ವಿದ್ಯಾರ್ಥಿಗಳು ಮಾಡುತ್ತಿರುವ ಹೋರಾಟ ನ್ಯಾಯಬದ್ದವಾಗಿದೆ. ನಿಮ್ಮ ಹೋರಾಟ ನಿಲ್ಲಬಾರದು. ಈ ಸಮಸ್ಯೆಗೊಂದು ತಾರ್ಕಿಕ ಅಂತ್ಯ ಸಿಗುವ ತನಕ ಹೋರಾಡಬೇಕು ಎಂದರು. ಜೈನುದ್ದೀನ್ ಕೆಂಪಿ ಮಾತನಾಡಿದರು.
ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಬೆಂಬಲ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಮಚಂದ್ರ ಅಮಳ, ಸಿಐಟಿಯು ಮುಖಂಡ ಪಿ.ಕೆ.ಸತೀಶನ್, ನಗರಸಭಾ ನಿಕಟಪೂರ್ವ ಸದಸ್ಯ ರಿಯಾಜ್ ಪರ್ಲಡ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜ, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಂಗ್ರೇಸ್ ಮುಖಂಡರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ಶೇಷಪ್ಪ ನೆಕ್ಕಿಲು ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ಸಂಚಾಲಕ ಭಾತೀಶ್ ಅಳಕೆಮಜಲು ಸ್ವಾಗತಿಸಿ ವಂದಿಸಿದರು.