ಆರೋಪಿಯ ಪೋಟೋ ಎಡಿಟ್ ಗೈದ ವಿಕೃತಿ: ಬಂಟ್ವಾಳ ಠಾಣೆಯಲ್ಲಿ ಮೂರು ಕೇಸು ದಾಖಲು
ಬಂಟ್ವಾಳ: ಅಮಾಯಕ ಹಿಂದೂ ಯುವತಿ ಕಕ್ಕೆಪದವಿನ ಲಾವಣ್ಯಳ ಬರ್ಬರ ಹತ್ಯೆಯ ಸಂದರ್ಭದಲ್ಲೂ ಸೋಶಿಯಲ್ ನೆಟ್ ವರ್ಕ್ ವೀರರು ಎನಿಸಿಕೊಳ್ಳಲು ಬಯಸುವ ದುಷ್ಕರ್ಮಿಗಳು ತಮ್ಮ ವಿಕೃತಿ ಮೆರೆದಿದ್ದು, ಸಾಮಾಜಿಕ ಜಾಲ ತಾಣಗಳ ವಿವಿಧ ಫ್ಲಾಟ್ ಫಾರ್ಮ್‌ಗಳಲ್ಲಿ ತಮ್ಮ ತೀಟೆ ತೀರುಸುವಂತಹ ಬರಹಗಳನ್ನು ಬರೆದುಕೊಂಡಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿಮೂರು ಪ್ರಕರಣ ದಾಖಲಾಗಿದೆ.
ವಿವಿಧ ವಾಟ್ಸಪ್ ಗ್ರೂಪ್‌ಗಳು ಹಾಗೂ ಇನ್ ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮ ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂದಿಸಿದಂತೆ ಟ್ರೋಲ್ ಮಾಸ್ಟರ್ ಇನ್ಸಾಗ್ರಾಂ ಖಾತೆ, ಯುವ ಬೆಳ್ತಂಗಡಿ ವಾಟ್ಸಪ್ ಗ್ರೂಪ್, ಪದ್ಮರಾಜ್ ವಾಟ್ಸಪ್ ಗ್ರೂಪ್, ಯುವ ಕಾಂಗ್ರೆಸ್ ಬೆಳ್ತಂಗಡಿ ವಾಟ್ಸಪ್ ಗ್ರೂಪ್, ಫ್ಯಾಕ್ಟ್ ಆಂಡ್ ಜಸ್ಟಿಸ್ ವಾಟ್ಸಪ್ ಗ್ರೂಪ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಹಾಗೆಯೇ ಫೇಸ್‌ಬುಕ್‌ನಲ್ಲಿ ಶೈಲಜಾ ಅಮರನಾಥ್ ಎಂಬವರ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಫೋಸ್ಟ್ ಹಾಕಿರುವ ಬಗ್ಗೆ ಎರಡನೇ ಪ್ರಕರಣ ದಾಖಲಾಗಿದೆ.
ಚೇತನ್ ಬೆಳ್ಳಡ ಎಂಬ ಫೇಸ್ ಬುಕ್ ಪೇಜಿನಲ್ಲಿ ಪ್ರಕರಣದ ಆರೋಪಿಯ ಫೋಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತೆನೆಂದು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.