ಪ್ರೀತಿ ನಿರಾಕರಣೆ: ಅಪ್ರಾಪ್ತ ಬಾಲಕಿಗೆ ಚೂರಿ ಇರಿತ
ಬಂಟ್ವಾಳ: ಕಾಲೇಜು ತೆರಳಲು ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಇರಾ ಸಮೀಪದ ಮೋಂತಿಮಾರು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕಾಲೇಜಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಸ್ಥಳೀಯ ನಿವಾಸಿ ಜವ್ವರ್ (28) ಎಂಬಾತ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ್ದಾನೆ. ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇಬ್ಬರು ಕೂಡ ಇರಾ ಬಳಿಯ ಮೋಂತಿಮಾರ್ ಪಡ್ಪು ನಿವಾಸಿಗಳಾಗಿದ್ದು ಪ್ರೀತಿ ನೆಪದಲ್ಲಿ ಯುವಕ ಜವ್ವಾರ್ ಯುವತಿಯ ಹಿಂದೆ ಬಿದ್ದಿದ್ದ. ಪ್ರೀತಿ ನಿರಾಕರಿಸಿದ ಆಕ್ರೋಶದಲ್ಲಿ ಇಹಿಂಬಾಲಿಸುತ್ತಾ ಬಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲಿದ್ದ ಸ್ಥಳೀಯರು ಬೊಬ್ಬೆ ಹಾಕಿದ್ದರಿಂದ ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ. ಆಕೆಯನ್ನು ಬಳಿಕ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚೂರಿ ಇರಿತದಿಂದ ತೀವ್ರ ರಕ್ತ ಸ್ರಾವವಾಗಿದ್ದು ಬಸ್ ನಿಲ್ದಾಣದಲ್ಲಿ ರಕ್ತ ಚೆಲ್ಲಿದೆ. ಪ್ರಕರಣ ದಾಖಲಾಗಿರುವ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜವ್ಬಾರ್ ಅದೇ ಬಸ್ ನಿಲ್ದಾಣ ಬಳಿಯಲ್ಲಿ ದಿನಸಿ ಅಂಗಡಿ ಸಡೆಸುತ್ತಿದ್ದ. ಏಕಾಏಕಿ ಚೂರಿಯಿಂದ ಹಲ್ಲೆ ನಡೆಸಿದ್ದು ವಿದ್ಯಾರ್ಥಿನಿ ಬೊಬ್ಬೆ ಹಾಕಿ ಆತನ ಕೈಯಿಂದ ಪಾರಾಗಿದ್ದಾಳೆ.