ನರಿಮೊಗರು ಶಾಲೆಯಲ್ಲಿ ಅತಿಥಿ ಶಿಕ್ಷಕರಿಗಾಗಿ ಪ್ರತಿಭಟನೆ: ಶಿಕ್ಷಣ ಇಲಾಖೆಯಿಂದ ಅನ್ಯಾಯವಾಗುತ್ತಿದೆ: ಆಕ್ರೋಶ
ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯ ಕಡಿಮೆ ಇತ್ತು. ಇಂತಹ ಸಂದರ್ಭ ಶಾಲಾ ಮುಖ್ಯಗುರು ಆಗಿದ್ದ ಶ್ರೀಲತಾ ಅವರು ನೇತೃತ್ವದಲ್ಲಿ ಶಾಲಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆಂಗ್ಲಭಾಷಾ ಕಲಿಕೆಯನ್ನೂ ಪ್ರಾರಂಭಿಸಲಾಗಿತ್ತು. ಇದರಿಂದ ಕೇವಲ 100 ಇದ್ದ ಮಕ್ಕಳ ಸಂಖ್ಯೆ 300ಕ್ಕೇರಿದೆ. ಇಲ್ಲಿನ ಇಬ್ಬರು ಶಿಕ್ಷಕರಿಗೆ ಬಿಎಲ್‌ಒ ಕರ್ತವ್ಯಕ್ಕೆ ಹಾಕಲಾಗಿದೆ. ಇದರಿಂದ ಶಾಲೆಯಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಪ್ರಸ್ತುತ ನೂತನ ಶಾಲಾ ಮುಖ್ಯಗುರುಗಳು ಆಗಮಿಸಿದ್ದಾರೆ. ಆದರೆ ಇಲ್ಲಿ ಅತಿಥಿ ಶಿಕ್ಷಕರನ್ನು ಇಲಾಖೆಯಿಂದ ನೀಡಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಕ್ವೆ ಶಾಲೆಯಲ್ಲಿ 82 ಮಕ್ಕಳಿದ್ದು, ಅಲ್ಲಿ 3 ಅಧಿಕೃತ ಶಿಕ್ಷಕರಿದ್ದಾರೆ. ಆದರೆ ಆ ಶಾಲೆಗೆ 2 ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಆನಡ್ಕದಲ್ಲಿ 61 ಮಕ್ಕಳಿಗೆ 3 ಅಧಿಕೃತ ಶಿಕ್ಷಕರಿದ್ದು, ಓರ್ವ ಅತಿಥಿ ಶಿಕ್ಷಕರ ನೇಮಕಾತಿ ಆಗಿದೆ. ಶಾಂತಿಗೋಡಿನಲ್ಲಿ 32 ಮಕ್ಕಳಿದ್ದು, ಒಬ್ಬರು ಅಧಿಕೃತ ಹಾಗೂ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಸರ್ವೆ ಭಕ್ತಕೋಡಿಯಲ್ಲಿ ೮೮ ಮಕ್ಕಳಿಗೆ 6 ಮಂದಿ ಅಧಿಕೃತ ಶಿಕ್ಷಕರು ಇದ್ದಾರೆ. ಆದರೆ 200 ಮಕ್ಕಳಿರುವ ನಮ್ಮ ಶಾಲೆಗೆ ಒಂದೇ ಒಂದು ಅತಿಥಿ ಶಿಕ್ಷಕರನ್ನೂ ಕೊಟ್ಟಿಲ್ಲ. ಇದು ಯಾವ ನ್ಯಾಯ ಎಂದು ಅವರು ಇಲಾಖೆಯನ್ನು ಪ್ರಶ್ನಿಸಿದರು.
ನರಿಮೊಗರು ಶಾಲೆ ಪ್ರಸ್ತುತ ದಾನಿಗಳ ಹಾಗೂ ಪೋಷಕರ ನೆರವಿನಿಂದ ಖಾಸಗಿ ಶಾಲೆಗಿಂತಲೂ ಒಂದು ಹೆಜ್ಜೆ ಮುಂದಿದೆ. ಆದರೆ ಅತಿಥಿ ಶಿಕ್ಷಕರನ್ನು ನೀಡದ ಇಲಾಖೆ ಸತಾಯಿಸುತ್ತಿದೆ. ನಮ್ಮ ಶಾಲೆಗೆ ಅತಿಥಿ ಶಿಕ್ಷಕರ ಅಗತ್ಯ ಇದೆ. ಇಲಾಖೆ ಮಾತ್ರ ನಮ್ಮ ಶಾಲೆಗೆ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳಿಗೆ ಎರಡೆರಡು ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಇಲಾಖೆ ನಮ್ಮ ಶಾಲೆಗೆ ವಂಚನೆ ಮಾಡುತ್ತಿದೆ. ತಕ್ಷಣ ನಮ್ಮ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಶಾಸಕರ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅವರಿಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಆಚಾರ್ಯ, ಮಾಜಿ ಅಧ್ಯಕ್ಷ ಉಸ್ಮಾನ್ ನೆಕ್ಕಿಲ್, ಉಪಾಧ್ಯಕ್ಷೆ ಸೌಮ್ಯ ಮತ್ತಿತರರು ಭಾಗವಹಿಸಿದ್ದರು.