ರಸ್ತೆಗೆ ಉರುಳಿದ ಮರ: ಚಾರ್ಮಾಡಿ ಸಂಚಾರ ವ್ಯತ್ಯಯ
Wednesday, July 1, 2026
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 10ನೇ ತಿರುವಿನ ಸಮೀಪ ಮರವೊಂದು ರಸ್ತೆಗೆ ಉರುಳಿ ಸುಮಾರು ಒಂದು ತಾಸು ಕಾಲ ಸಂಚಾರ ವ್ಯತ್ಯಯ, ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸಂಜೆ 7 ಗಂಟೆ ಸುಮಾರಿಗೆ ಮರ ಉರುಳಿ ಬಿದ್ದಿದ್ದು, ರಸ್ತೆ ಸಂಪೂರ್ಣ ಬ್ಲಾಕ್ ಆಗಿ ಇಕ್ಕೆಲಗಳಲ್ಲೂ ಒಂದೂವರೆ ತಾಸಿನಷ್ಟು ಕಾಲ ವಾಹನಗಳು ಸಾಲುಗಟ್ಟಿ ನಿಂತವು.
ಜೋರಾಗಿ ಸುರಿಯುತ್ತಿದ್ದ ಮಳೆ, ಮಂಜು ಕವಿದ ವಾತಾವರಣ, ಬೆಳಕಿನ ಅಭಾವ ತ್ವರಿತವಾಗಿ ಮರ ತೆರವುಗೊಳಿಸಲು ಅಡ್ಡಿಯಾಯಿತು.
ಉಪವಲಯ ಅರಣ್ಯಾಧಿಕಾರಿ ರಂಜಿತ್, ಸಿಬ್ಬಂದಿಗಳಾದ ಗೋಪಾಲ, ಮನೋಹರ್, ಇಸ್ಮಾಯಿಲ್, ವಾಹನ ಸವಾರರು ಹಾಗೂ ಮತ್ತಿತರರು ಮರ ತೆರವಿಗೆ ಸಹಕರಿಸಿದರು.
ಸೋಮವಾರ ಬೆಳಗಿನ ಜಾವ ಎರಡನೇ ತಿರುವಿನ ಬಳಿ ಮರ ರಸ್ತೆಗೆ ಬಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಘಾಟಿ ಪ್ರದೇಶದಲ್ಲಿ ನೂರಾರು ಅಪಾಯಕಾರಿ ಮರಗಳಿದ್ದು, ಜೋರಾದ ಮಳೆ ವೇಳೆ ರಸ್ತೆಗೆ ಉರುಳಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.