ಕಲಾ ವಿಭಾಗದತ್ತ ವಿದ್ಯಾರ್ಥಿಗಳ ನಿರಾಸಕ್ತಿ-ಮೂರು ಕಾಲೇಜುಗಳಲ್ಲಿ ಬಿಎ ಸ್ಥಗಿತ: ಪ್ರೊ. ಪಿ. ಎಲ್. ಧರ್ಮ
ಸೋಮವಾರ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಮೂಲಕ ನಡೆದ ಮಂಗಳೂರು ವಿವಿಯ ಪ್ರಸಕ್ತ ಸಾಲಿನ ಮೊದಲ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸರಕಾರದ ಆದೇಶದನ್ವಯ ಪ್ರವೇಶಾತಿ ಇಲ್ಲದ ಕೋರ್ಸ್‌ಗಳನ್ನು ರದ್ದುಗೊಳಿಸಿ, ಹೊಸ ಉದ್ಯೋಗ ಆಧಾರಿತ ಕೋರ್ಸ್ಗಳನ್ನು ಆರಂಭಿಸಲು ಒಪ್ಪಿಗೆ ನೀಡಲಾಗಿದೆ
ಯಾವ ಕಾಲೇಜು..
ಮಂಗಳೂರಿನ ಕಾವೂರು ಸರಕಾರಿ ಕಾಲೇಜು ಇಲ್ಲಿ ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಹಾಗೂ ಇತಿಹಾಸ, ಪತ್ರಿಕೋದ್ಯಮ, ಕನ್ನಡ ಕಾಂಬಿನೇಷನ್‌ಗಳು ಬಂದ್ ಆಗಿದೆ.
ಪುಂಜಾಲಕಟ್ಟೆ ಸರಕಾರಿ ಕಾಲೇಜಿನ ಅರ್ಥಶಾಸ್ತ್ರ, ಕನ್ನಡ ಮತ್ತು ಸಮಾಜಶಾಸ್ತ್ರ ಕಾಂಬಿನೇಷನ್ ರದ್ದಾಗಿದೆ. ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು ಇಲ್ಲಿನ ಇಂಗ್ಲಿಷ್, ಇತಿಹಾಸ ಮತ್ತು ರಾಜ್ಯಶಾಸ್ತ್ರ ಕಾಂಬಿನೇಷನ್‌ನ್ನು ಮುಚ್ಚಲಾಗಿದೆ.
ವಿಪತ್ತು ನಿರ್ವಹಣೆ..
ಭೂಕಂಪ, ಭೂಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳ ಬಗ್ಗೆ ಅಧ್ಯಯನ ನಡೆಸುವ ವಿಪತ್ತು ನಿರ್ವಹಣೆ ಕೋರ್ಸ್ ಅನ್ನು ಓಪನ್ ಎಲೆಕ್ಟಿವ್ ಆಗಿ ಸೇರಿಸಲು ಹಾಗೂ ಜಾಗತಿಕ ಆಹಾರದ ಕೊರತೆ ನೀಗಿಸಲು ಕೃಷಿ ಚಟು ವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜ್ಞಾನ ವಿಭಾಗದ ಪಠ್ಯಕ್ರಮದಲ್ಲಿ ಆಹಾರ ಬಿಕ್ಕಟ್ಟು ಕುರಿತ ವಿಷಯಗಳನ್ನು ಸೇರಿಸಲು ವಿಭಾಗೀಯ ಮುಖ್ಯಸ್ಥರಿಗೆ ವಿವಿಯ ಶೈಕ್ಷಣಿಕ ಮಂಡಳಿ ಸಭೆ ಸಲಹೆ ನೀಡಿದೆ.
ಉದ್ಯೋಗ ಆಧಾರಿತ ಕೋರ್ಸ್..
ಬಿಎ ಕೋರ್ಸ್ಗಳು ಬಂದ್ ಆಗುತ್ತಿದ್ದರೂ, ವಿದ್ಯಾರ್ಥಿಗಳ ಈಗಿನ ಬೇಡಿಕೆಗೆ ತಕ್ಕಂತೆ ಉಪ್ಪಿನಂಗಡಿ, ಪುಂಜಾಲಕಟ್ಟೆ ಹಾಗೂ ಪುತ್ತೂರಿನ ಸರಕಾರಿ ಕಾಲೇಜುಗಳಲ್ಲಿ ಹೊಸ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲು ಅನುಮೋದನೆ ನೀಡಲಾಗಿದೆ.
ಹೊಸ ಕೋರ್ಸ್‌ಗಳು..
ಬಿ.ಕಾಂ ಬ್ಯಾಂಕಿಂಗ್ ಫೈನಾನ್ಷಿಯಲ್ ಸರ್ವಿಸಸ್ ಅಂಡ್ ಇನ್ಶೂರೆನ್ಸ್ (ಬಿಎಫ್‌ಎಸ್‌ಐ), ಹ್ಯೂಮನ್ ರಿಸೋರ್ಸ್ ಆಪರೇಷನ್ಸ್ (ಎಚ್‌ಆರ್), ಲಾಜಿಸ್ಟಿಕ್ಸ್ ಹಾಗೂ ಬಿಎಸ್ಸಿ ಕೋರ್ಸ್‌ಗಳಿಗೆ ಅನುಮೋದನೆ ನೀಡಲಾಗಿದೆ.
ಸೀಟುಗಳ ಸಂಖ್ಯೆ ಹೆಚ್ಚಳಕ್ಕೆ ಅಸ್ತು:
ಮುಡಿಪು ಮತ್ತು ಹರೇಕಳ ಸರಕಾರಿ ಕಾಲೇಜುಗಳಲ್ಲಿ ಬಿ.ಕಾಂ ಮತ್ತು ಬಿಬಿಎ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ.