ಮನೆಯ ಡೈನಿಂಗ್ ಹಾಲ್‌ನಲ್ಲಿ ಕಾಳಿಂಗ ಪ್ರತ್ಯಕ್ಷ
Monday, July 20, 2026
ಬೆಳ್ತಂಗಡಿ: ನಾವೂರು ನಿವಾಸಿ ವಿಗ್ರೇಡ್ ಡಿಸೋಜಾ ಎಂಬುವವರ ಮನೆಯ ಡೈನಿಂಗ್ ಹಾಲ್‌ನಲ್ಲಿ ಭಾನುವಾರ ಮಧ್ಯಾಹ್ನ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ, ಮನೆಮಂದಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ್ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ವಿಗ್ರೇಡ್ ಡಿಸೋಜಾ ಅವರ ಮನೆಯ ಡೈನಿಂಗ್ ಹಾಲ್‌ನಲ್ಲಿ ಮಧ್ಯಾಹ್ನ ಸುಮಾರಿಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಬೃಹತ್ ಕಾಳಿಂಗ ಸರ್ಪವನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಧೈರ್ಯಗೆಡದೆ, ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ್ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್, ಕಾಳಿಂಗ ಸರ್ಪವನ್ನು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಗೋಣಿಚೀಲಕ್ಕೆ ತುಂಬಿದ್ದಾರೆ. ಬಳಿಕ ಸರ್ಪವನ್ನು ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸಕಾಲದಲ್ಲಿ ಧಾವಿಸಿ ಬಂದು ರಕ್ಷಣೆ ಮಾಡಿದ ಸ್ನೇಕ್ ಅಶೋಕ್ ಅವರ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಮನೆಯವರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.