ಕಲ್ಲು ಎತ್ತಿ ಹಾಕಿ ತಮ್ಮನ ಕೊಲೆ ಮಾಡಿದ ಅಣ್ಣ
ಮಂಗಳೂರು: ರಾತ್ರಿ ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಕೊಲೆಗೈದಿರುವ ಘಟನೆ ಸುರತ್ಕಲ್ ಚೊಕ್ಕಬೆಟ್ಟು ಮಠದ ಬಳಿ ಕಳೆದ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ ಹಾಗೂ ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ.
ಈತನ ಅಣ್ಣ ಸೋಮನಾಥ್ (21) ಕೊಲೆಗೈದ ಆರೋಪಿ. ಆತನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಲಗಿದ್ದಲ್ಲೇ ತಲೆಗೆ ಕಲ್ಲು ಎತ್ತಿಹಾಕಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನನ ಮೃತದೇಹ ಪತ್ತೆಯಾಗಿದೆ.
ತಾಯಿಯೊಂದಿಗೆ ಇಬ್ಬರು ಸಹೋದರರು ವಾಸವಾಗಿದ್ದರು. ತಾಯಿ ಇತ್ತೀಚೆಗೆ ಕೊಪ್ಪಳಕ್ಕೆ ಹೋಗಿದ್ದರು. ಘಟನೆ ನಡೆದ ರಾತ್ರಿ ಸಹೋದರರಿಬ್ಬರು ಮನೆಯಲ್ಲಿ ಮಲಗಿದ್ದರು. ಆದರೆ ಬೆಳಗ್ಗೆ ನಿದ್ದೆಯಿಂದ ಎದ್ದ ಸೋಮನಾಥ್, "ನನ್ನ ತಮ್ಮ ಮಲಗಿದ್ದಲ್ಲಿಂದ ಏಳುತ್ತಿಲ್ಲ" ಎಂದು ನೆರೆಮನೆಯವರಿಗೆ ತಿಳಿಸಿದ್ದಾನೆ. ನೆರೆಮನೆಯವರು ಮನೆಯ ಮಾಲಕಿ ರೇಖಾ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಎಚ್.ಎನ್., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್, ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.