ಶವ ಪತ್ತೆ: ಒಬ್ಬನ ಬಂಧನ
ಬೆಳ್ತಂಗಡಿ: ಜು.1ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಶನ್ ಬಳಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಪ್ರಕರಣದಲ್ಲಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಅಸಹಜ ಸಾವು ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ತಣ್ಣೀರುಪಂಥ ಗ್ರಾಮದ ನಿವಾಸಿ, ಲಾರಿ ಚಾಲಕನಾಗಿದ್ದ ಮುಶ್ತಾಕ್ ಎಂಬವನ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿತ್ತು. ಪೊಲೀಸರ ತನಿಖೆಯಲ್ಲಿ ಸ್ಥಳದಲ್ಲಿ ಕಳವು ಕೃತ್ಯ ನಡೆದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026, ಕಲಂ 331(4),305 ಜೊತೆಗೆ 3(5) ಬಿಎನ್ ಎಸ್-2023 ಪ್ರಕರಣ ದಾಖಲಾಗಿದ್ದು, ಕಳವು ಕೃತ್ಯದ ತನಿಖೆ ನಡೆಸಿದ ಪೊಲೀಸರು ಬೆಳ್ತಂಗಡಿ ಕಾಶಿಪಟ್ನ ನಿವಾಸಿ ಇಬ್ರಾಹಿಂ ಲತೀಫ್ (36) ಎಂಬಾತನನ್ನು ಜು.೧೪ರಂದು ಬಂಧಿಸಿದ್ದಾರೆ.
ಆರೋಪಿಯ ವಿಚಾರಣೆಯ ವೇಳೆ ಮೃತ ಮುಶ್ತಾಕ್ ಹಾಗೂ ಇಬ್ರಾಹಿಂ ಲತೀಫ್ (36) ಮತ್ತೋರ್ವ ಆರೋಪಿಯೊಂದಿಗೆ ಸೇರಿ ಜೂನ್ 30 ರಂದು ರಾತ್ರಿ ಬೆಳ್ತಂಗಡಿ ಕುವೆಟ್ಟು ಶಕ್ತಿನಗರ ಎಂಬಲ್ಲಿರುವ ಯೇನಪೋಯ ಸಂಸ್ಥೆಯ ವಿದ್ಯುತ್ ಸಬ್ ಸ್ಟೇಶನ್ ಆವರಣದಲ್ಲಿದ್ದ ಅಲ್ಯೂಮಿನಿಯಂ/ಕಬ್ಬಿಣದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ವೇಳೆ ಆಕಸ್ಮಿಕವಾಗಿ ಮುಶ್ತಾಕ್ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿರುವುದಾಗಿ ಬಂಧಿತ ಇಬ್ರಾಹಿಂ ಲತೀಫ್ ತಿಳಿಸಿದ್ದಾನೆ. ಆರೋಪಿ ಕಳ್ಳತನ ಮಾಡಿದ ಒಟ್ಟು 550 ಕೆಜಿ ಅಲ್ಯೂಮಿನಿಯಂ ವಯರ್ ಗಳನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿಯ ವಿಚಾರಣೆಯ ವೇಳೆ ವೇಣೂರು ಠಾಣೆ, ಉಪ್ಪಿನಂಗಡಿ ಠಾಣೆ, ಅರೆಹಳ್ಳಿ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಗಳಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ. ಇನ್ನೊಬ್ಬ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.