ಬಿಜೆಪಿಯವರೇ ಭಾರತ ಬಿಟ್ಟು ತೊಲಗಿ: ಮಂಜುನಾಥ ಪೂಜಾರಿ ಮುದ್ರಾಡಿ ಕಿಡಿನುಡಿ
ಅವರು ಜು. 25ರಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ಮತ್ತು ಹೆಬ್ರಿ ಹಾಗೂ NSUI ಆಶ್ರಯದಲ್ಲಿ ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಅನಂತಶಯನ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಭ್ರಷ್ಟ ಬಿಜೆಪಿ ಸರಕಾರದಿಂದ ಇಡೀ ದೇಶದಲ್ಲಿ ಹಗರಣ ನಡೆಯುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ನಾಶ ಮಾಡಿದೆ. 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿಯವರು ಏನೂ ಹೇಳದೆ ಆರ್‌ಎಸ್‌ಎಸ್‌ನವರ ಒತ್ತಡಕ್ಕೆ ಮಣಿದು ಮಧ್ಯರಾತ್ರಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಯುವ ಸಮುದಾಯ ಜಾಗೃತವಾಗಿದೆ, ಪ್ರಧಾನಿಯವರು ದೇಶ ಬಿಟ್ಟು ತೊಲಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಪ್ರಧಾನಿಯವರು ಸಂಸತ್ತಿನಲ್ಲಿ ಮಕ್ಕಳ ಭರವಸೆಗಳನ್ನು ಈಡೇರಿಸಲಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಮೂಲಕ ಮಕ್ಕಳಿಗೆ ನ್ಯಾಯ ಕೊಡಿಸಲಿ ಎಂದು ಹೇಳಿದರು.
ಮಾದರಿ ಹೋರಾಟ:
ನೀಟ್ ಅಕ್ರಮ ವಿರೋಧಿಸಿ ಪ್ರಧಾನಿ ಮನೆ ಮುಂದೆ ರಾಹುಲ್ ಗಾಂಧಿಯವರು ಮಾಡಿದ ಹೋರಾಟ ಮಾದರಿಯಾಗಿದೆ. ದೇಶ ಮೊದಲು ಎನ್ನುವ ಪ್ರಧಾನಿ ಬಾಯಲ್ಲಿ ಈಗ ನಾನು ಅನ್ನುವ ಮಾತು ಬರುತ್ತಿದೆ. ಮಾತು ಪ್ರಾರಂಭಿಸಿದರೆ ಪಾಕಿಸ್ಥಾನ, ಬಾಂಗ್ಲಾ ಎನ್ನುತ್ತಾರೆ. ಅವರ ಮೂಲ ಪಾಕಿಸ್ಥಾನ ಇರಬೇಕು ಎಂದು ಲೇವಡಿ ಮಾಡಿದ ಮಂಜುನಾಥ್ ಪೂಜಾರಿ ಸಂವಿಧಾನ ಸಂಸ್ಥೆಗಳ ಲೂಟಿ, ಹಗರಣ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾದ ಭ್ರಷ್ಟ ಪ್ರಧಾನಿಯನ್ನು ನಾವೆಲ್ಲಾ ಒಟ್ಟಾಗಿ ದೇಶದಿಂದ ತೊಲಗಿಸೋಣ, ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸೋಣ ಎಂದರು.
ಶಾಸಕರು-ಪೇಜಾವರ ಸ್ವಾಮಿಗಳ ಮೌನವೇಕೇ?
ಕಂಬಳ, ಕೋಳಿ ಅಂಕದ ಬಗ್ಗೆ ಮಾತನಾಡುವ ಕಾರ್ಕಳದ ಶಾಸಕರು ಈಗ ಮೌನವಾಗಿದ್ದಾರೆ. ಅವರು ಬಾಯಿ ಬಿಟ್ಟು ವಿದ್ಯಾರ್ಥಿಗಳ ಪರ ಮಾತನಾಡಲಿ. ಇನ್ನು ಪ್ರತಿ ವಿಷಯದಲ್ಲೂ ರಾಜಕೀಯವಾಗಿ ಪ್ರತಿಕ್ರಿಯಿಸುವ ಪೇಜಾವರ ಸ್ವಾಮೀಜಿಯವರು ರಾಮಮಂದಿರ ಲೂಟಿ, ನೀಟ್ ಅಕ್ರಮದ ಬಗ್ಗೆ ಸುಮ್ಮನಿದ್ದಾರೆ ಎಂದರು.
ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿದೆ. ಇದನ್ನು ವಿರೋಧಿಸಿ ನ್ಯಾಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ ಕೇಂದ್ರ ಸರಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ. ವಿದ್ಯಾರ್ಥಿಗಳ ಮೂರು ಬೇಡಿಕೆಗಳಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ರದ್ದು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಇದನ್ನು ಬೇಗನೇ ಈಡೇರಿಸಲಿ, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನಮೋಹನ್ ಮಾತು ಕಡಿಮೆಯಾದರೂ ಕೆಲಸ ಜಾಸ್ತಿಯಿತ್ತು:
ನೀಟ್ ಅಕ್ರಮ ವಿರೋಧಿಸಿ ಬಿಜೆಪಿ ಅಧಿಕಾರವಿರುವ ರಾಜ್ಯದಲ್ಲಿ ಪ್ರತಿಭಟನೆಗೂ ಅವಕಾಶವಿಲ್ಲದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರ್ದೈವ. ಯುವಕರು 12 ವರ್ಷಗಳಿಂದ ಒಳ್ಳೆಯ ದಿನ ಬರಬಹುದುದೆಂದು ಕಾಯುತ್ತಿದ್ದರು. ಆದರೆ, ಆ ದಿನ ಬರಲೇ ಇಲ್ಲ. ಕಾಂಗ್ರೆಸ್ ಸರಕಾರದಲ್ಲಿ ಜನ ಖುಷಿಯಾಗಿದ್ದರು. ಮನಮೋಹನ್ ಸಿಂಗ್ ಅವರ ಮಾತು ಕಡಿಮೆಯಿತ್ತು, ಆದರೆ ಅವರು ಒಳ್ಳೆಯ ಕೆಲಸ ಮಾಡಿದ್ದರು. ಪ್ರಸ್ತುತ ಮೋದಿ ನೇತೃತ್ವದ ಸರಕಾರದಲ್ಲಿ ಜನತೆಗೆ ಸ್ಪಂದನೆಯಿಲ್ಲ, ಭಯಭೀತವಾದ ವಾತಾವರಣ ಸೃಷ್ಟಿಯಾಗಿದೆ ಎಂದ ಅವರು ನೀಟ್ ಅಕ್ರಮ ಕುರಿತಂತೆ ಕೇಂದ್ರ ಸರಕಾರ ತಕ್ಷಣವೇ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಿ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರಪಾಲ್ ನಕ್ರೆ, ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಅಧ್ಯಕ್ಷ ಶುಭದ ರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಮಾತನಾಡಿ ನೀಟ್ ಅಕ್ರಮ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಗ್ಯಾರಂಟಿ ಅನುಷ್ಠಾನ ಸಮಿತಿ ಹೆಬ್ರಿ ತಾಲೂಕು ಅಧ್ಯಕ್ಷ ಶಂಕರ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಕೃಷ್ಣ ಬಜಗೋಳಿ, ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಯೋಗೀಶ್ ಆಚಾರ್ಯ ಇನ್ನಾ, ಮಂಜುನಾಥ್ ಜೋಗಿ, ಜಾರ್ಜ್ ಕ್ಯಾಸ್ತಲಿನೋ, ಸುಧಾಕರ್ ಮುಡಾರು, ಶಬ್ಬೀರ್ ಮಿಯ್ಯಾರು, ನವೀನ್ ದೇವಾಡಿಗ, ಮಾಲಿನಿ ರೈ, ಭಾನು ಭಾಸ್ಕರ್ ಸೇರಿದಂತೆ ಕಾರ್ಕಳ- ಹೆಬ್ರಿ ಬ್ಲಾಕ್ ಕಾಂಗ್ರೆಸ್‌ನ ವಿವಿಧ ಘಟಕದ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.