ನೀಟ್ ಪ್ರಕಟಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ನೀಟ್ ಪ್ರಕಟಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ


ಹೊಸದಿಲ್ಲಿ: ‘ನಮ್ಮನ್ನು ಕಾಕ್ರೋಚ್‌ಗಳು ಎಂದು ಕರೆದಿದ್ದಕ್ಕಾಗಿ ಧನ್ಯವಾದಗಳು’. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಉದ್ದೇಶಿಸಿ ಮಾಡಿದ ಈ ಹೇಳಿಕೆ, ಕಳೆದ ಎರಡು ತಿಂಗಳಿನಿಂದ ನಡೆದಿದ್ದ ಚಳುವಳಿಯ ಹಾದಿಯನ್ನು ನೆನಪಿಸಿತು.

‘ನಾನು CJI ಸೂರ್ಯಕಾಂತ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನಮ್ಮನ್ನು ಕಾಕ್ರೋಚ್ ಗಳು ಎಂದು ಕರೆಯದಿದ್ದರೆ, ನಾನು ಭಾರತಕ್ಕೆ ಬರುತ್ತಿರಲಿಲ್ಲ. ಈ ಚಳುವಳಿ ಆರಂಭವಾಗುತ್ತಿರಲಿಲ್ಲ’ ಎಂದು ದೀಪ್ಕೆ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.

ದೀಪ್ಕೆ ಉಲ್ಲೇಖಿಸಿದ ಘಟನೆ ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಸಂಬಂಧಿಸಿದೆ. ಹಿರಿಯ ವಕೀಲರ ಹುದ್ದೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ CJI ಸೂರ್ಯಕಾಂತ್, ‘ಕಾಕ್ರೋಚ್ ಗಳಂತಹ ಯುವಕರು ಇದ್ದಾರೆ. ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ ಮತ್ತು ವೃತ್ತಿಯಲ್ಲಿ ಯಾವುದೇ ಸ್ಥಾನವಿಲ್ಲ’ ಎಂದು ಹೇಳಿದ್ದರು.

ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾದ ಬಳಿಕ, CJI ಸೂರ್ಯಕಾಂತ್ ಅವರು ಸ್ಪಷ್ಟನೆ ನೀಡಿ, ತಮ್ಮ ಹೇಳಿಕೆ ನಿರುದ್ಯೋಗಿ ಯುವಕರನ್ನು ಉದ್ದೇಶಿಸಿರಲಿಲ್ಲ. ನಕಲಿ ಕಾನೂನು ಪದವಿಗಳನ್ನು ಪಡೆದವರ ಕುರಿತು ಮಾತ್ರ ಆ ಮಾತುಗಳನ್ನು ಹೇಳಿದ್ದಾಗಿ ತಿಳಿಸಿದ್ದರು. ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿವೆ ಎಂದೂ ಅವರು ಪುನರುಚ್ಚರಿಸಿದ್ದರು. ಆದರೂ, ಈ ಸ್ಪಷ್ಟೀಕರಣದಿಂದ ವಿವಾದ ತಣ್ಣಗಾಗಲಿಲ್ಲ. "ಕಾಕ್ರೋಚ್" ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಯಿತು.

ಆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸಂವಹನ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಬೋಸ್ಟನ್ ಮೂಲದ ವಿದ್ಯಾರ್ಥಿಯಾಗಿದ್ದ ಅಭಿಜೀತ್ ದೀಪ್ಕೆ, ಮರುದಿನ ಘಿನಲ್ಲಿ ವ್ಯಂಗ್ಯಾತ್ಮಕ ಪ್ರತಿಕ್ರಿಯೆ ಪ್ರಕಟಿಸಿದರು.

ಮೇ 16ರಂದು ಅವರು ಕಾಕ್ರೋಚ್ ಜನತಾ ಪಕ್ಷ (CJP) ಸ್ಥಾಪನೆಯನ್ನು ಘೋಷಿಸಿದರು. ‘ಎಲ್ಲಾ ಕಾಕ್ರೋಚ್‌ಗಳಿಗೆ’ ಈ ಪಕ್ಷ ವೇದಿಕೆಯಾಗಲಿದೆ ಎಂದು ಹೇಳಿದ ಅವರು, ನಿರುದ್ಯೋಗಿಗಳು, ಸೋಮಾರಿಗಳು, ದೀರ್ಘಕಾಲ ಆನ್‌ಲೈನ್‌ನಲ್ಲಿ ಕಾಲ ಕಳೆಯುವವರು ಹಾಗೂ "ವೃತ್ತಿಪರವಾಗಿ ಕೂಗಾಡುವ" ಸಾಮರ್ಥ್ಯ ಹೊಂದಿರುವವರು ಪಕ್ಷಕ್ಕೆ ಅರ್ಹರು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು.

ಮೇ ತಿಂಗಳ ಅಂತ್ಯದ ವೇಳೆಗೆ NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ದೇಶಾದ್ಯಂತ ವ್ಯಕ್ತವಾದ ಆಕ್ರೋಶದ ನಡುವೆ ಈ ವ್ಯಂಗ್ಯಾತ್ಮಕ ಅಭಿಯಾನಕ್ಕೆ ವ್ಯಾಪಕ ಬೆಂಬಲ ದೊರೆಯಿತು. ಜೂನ್ ಆರಂಭದಲ್ಲಿ ದೀಪ್ಕೆ ಭಾರತಕ್ಕೆ ಮರಳಿದ ಅವರು, ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳಿಗೆ ನೇತೃತ್ವ ವಹಿಸಿದರು.

ಜೂನ್ 28ರಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ, ಪರೀಕ್ಷಾ ಅಕ್ರಮಗಳಿಗೆ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಚಳುವಳಿಯ ಪ್ರಮುಖ ಬೇಡಿಕೆಯಾಯಿತು.

ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಿರುವುದು, ಪರೀಕ್ಷಾ ಸುಧಾರಣೆ ಮತ್ತು ಹೊಣೆಗಾರಿಕೆ ಕುರಿತು ಸಂಸತ್ತಿನಲ್ಲಿ ಕ್ರಮ ಕೈಗೊಳ್ಳುವುದು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಪರಿಗಣಿಸುವುದಾಗಿ ಕೇಂದ್ರ ಸರಕಾರ ಲಿಖಿತ ಭರವಸೆ ನೀಡಿದ ಬಳಿಕ, 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಸೋನಮ್ ವಾಂಗ್ಚುಕ್ ಅಂತ್ಯಗೊಳಿಸಿದರು.

ಜುಲೈ 20ರಂದು ಪ್ರತಿಭಟನಾಕಾರರ ಮೇಲೆ ನಡೆದ ಲಾಠಿಚಾರ್ಜ್ ಹಾಗೂ ಸರಕಾರದ ಆರಂಭಿಕ ಕಠಿಣ ನಿಲುವಿನ ನಡುವೆಯೂ, ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ ನಂತರವೂ CJP ತನ್ನ ಪ್ರಮುಖ ಬೇಡಿಕೆಯಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ ಮುಂದುವರಿಸಿತು.

ಶನಿವಾರ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ‘ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇನೆ. ಜಂತರ್ ಮಂತರ್ ಮತ್ತು ದೇಶದ ವಿವಿಧ ಭಾಗಗಳಲ್ಲಿನ ಪರಿಸ್ಥಿತಿಯಿಂದ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಯಾವುದೇ ಪ್ರಯೋಜನವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬಳಿಕ ಜಂತರ್ ಮಂತರ್‌ನಲ್ಲಿ ಮಾತನಾಡಿದ ಅಭಿಜೀತ್ ದೀಪ್ಕೆ, ಚಳುವಳಿಯ ಆರಂಭಕ್ಕೆ ಕಾರಣವಾದ ‘ಕಾಕ್ರೋಚ್’ ಹೇಳಿಕೆಯನ್ನು ಮತ್ತೆ ಪ್ರಸ್ತಾಪಿಸುವ ಮೂಲಕ, ನ್ಯಾಯಾಲಯದ ಆ ಹೇಳಿಕೆಯೇ ಈ ಜನಾಂದೋಲನದ ಬೀಜ ಬಿತ್ತಿತ್ತು ಎಂಬ ಸಂದೇಶವನ್ನು ಪುನರುಚ್ಚರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article