ಮೈಸೂರು ದಸರಾದಲ್ಲಿ ಕಂಬಳ: ಚರ್ಚಿಸಿ ನಿರ್ಧರಿಸಿ

ಮೈಸೂರು ದಸರಾದಲ್ಲಿ ಕಂಬಳ: ಚರ್ಚಿಸಿ ನಿರ್ಧರಿಸಿ

ಕಾರ್ಕಳ: ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಕುರಿತಂತೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸರ್ಕಾರವೂ ಮೈಸೂರಿನಲ್ಲಿ ಕಂಬಳ ನಡೆಸಲೇಬೇಕೆಂಬ ಹಠಕ್ಕೆ ಬಿದ್ದಿರುವುದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ, ಈ ಬಗ್ಗೆ ನಿರ್ಣಯಕ್ಕೆ ಬರುವುದಕ್ಕೆ ಮೊದಲು ಎಲ್ಲ ದೃಷ್ಟಿಕೋನಗಳಿಂದಲೂ ಯೋಚನೆ ಮಾಡಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕಂಬಳ ಕರಾವಳಿಯ ಸಾಂಸ್ಕೃತಿಕ ಕ್ರೀಡೆ. ಅದಕ್ಕೆ ಅದರದ್ದೇ ಆದ ಇತಿಹಾಸ ಹಾಗೂ ಸ್ಥಳೀಯ ಮೆರಗು ಇದೆ. ಭಾಷೆ, ಸಂಸ್ಕೃತಿ, ಕಲೆ, ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದು ಮಾತ್ರವಲ್ಲ ಅದರ ಆಕರ್ಷಣೆ ಹಾಗೂ ಮೆಚ್ಚುವಿಕೆಯಲ್ಲೂ ವ್ಯತ್ಯಾಸಕ್ಕೊಳಪಡುತ್ತವೆ. ಹಾಗಾಗಿ ಕರಾವಳಿಯ ಕ್ರೀಡೆಯನ್ನು ದಸರಾ ಉತ್ಸವದ ಕಾರಣಕ್ಕಾಗಿ ಮೈಸೂರಿಗೆ ರಫ್ತು ಮಾಡುವಾಗ ಅದರಿಂದಾಗುವ ಒಟ್ಟಾರೆ ಪರಿಣಾಮವನ್ನೂ ನಿಷ್ಕರ್ಷೆಗೊಒಳಪಡಿಸುವುದು ಅಗತ್ಯ. ಹಾಗಾಗಿ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಮೈಸೂರಿನ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುವ ಮುನ್ನ ಕರಾವಳಿಯ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ನಿರ್ಧಾರಕ್ಕೆ ಬರುವುದು ಒಳಿತು ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.

ದಸರಾ ಕಂಬಳಕ್ಕೆ ಸುಮಾರು 8 ಕೋ. ರೂ. ಖರ್ಚು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಆಶ್ಚರ‍್ಯ ತಂದಿದೆ. ಕಾರಣ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕಂಬಗಳಿಗೆ ರಾಜ್ಯ ಸರ್ಕಾರ ತಲಾ 2.5 ಲಕ್ಷ ರೂ. ನೀಡಲೂ ಹಿಂದೆಮುಂದೆ ನೋಡಿದೆ. ಜಿಲ್ಲಾ ಮಟ್ಟದ 20 ಕಂಬಳಿಗೆ ತಲಾ 25 ಲಕ್ಷ ರೂ. ನೀಡುವ ಕುರಿತು ರಾಜ್ಯ ಸರ್ಕಾರ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುನಿಲ್ ಕುಮಾರ್ ಸಲಹೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article