ಕರಾವಳಿಯಲ್ಲಿ ಜುಲೈ 11ರಿಂದ ಬಿಸಿಲ ವಾತಾವರಣ: ಮಳೆ ಪ್ರಮಾಣ ತಗ್ಗುವ ಸಾಧ್ಯತೆ

ಕರಾವಳಿಯಲ್ಲಿ ಜುಲೈ 11ರಿಂದ ಬಿಸಿಲ ವಾತಾವರಣ: ಮಳೆ ಪ್ರಮಾಣ ತಗ್ಗುವ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸದ್ಯ ಮಿಶ್ರ ವಾತಾವರಣ ಕಂಡುಬರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಳೆಯ ತೀವ್ರತೆ ಗಮನಾರ್ಹವಾಗಿ ಕಡಿಮೆಯಾಗುವ ಮುನ್ಸೂಚನೆ ಇದೆ. ಜುಲೈ 8ರ ತನಕ ಕರಾವಳಿಯಾದ್ಯಂತ ಬಿಟ್ಟು ಬಿಟ್ಟು ಮಳೆಯಾಗುವ ಪ್ರಸ್ತುತ ಹವಾಮಾನವೇ ಮುಂದುವರಿಯಲಿದ್ದು, ಜುಲೈ 11ರಿಂದ ಹೆಚ್ಚಿನ ಅವಧಿಗೆ ಬಿಸಿಲಿನ ವಾತಾವರಣ ತಲೆದೋರಲಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.

ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನವಿಡೀ ಏರುಪೇರಿನ ವಾತಾವರಣವಿತ್ತು. ಬೆಳ್ತಂಗಡಿ, ಪುತ್ತೂರು, ಕಡಬ ಸೇರಿದಂತೆ ಹಲವೆಡೆ ಬೆಳಗಿನ ಜಾವ ಗಾಳಿ ಸಹಿತ ಉತ್ತಮ ಮಳೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲು ಮಿಶ್ರಿತ ವಾತಾವರಣ ಕಂಡುಬಂದಿತ್ತು. ತದನಂತರ ಸಂಜೆಯಾಗುತ್ತಿದ್ದಂತೆ ಹಲವು ಭಾಗಗಳಲ್ಲಿ ಮತ್ತೆ ಮಳೆ ಸುರಿದಿದೆ. ಇನ್ನು ಮಂಗಳವಾರದ ಮುನ್ಸೂಚನೆಯ ಪ್ರಕಾರ, ಕಾಸರಗೋಡು ಸೇರಿದಂತೆ ಉಭಯ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡದ ಕಣ್ಣಾಮುಚ್ಚಾಲೆ ಇರಲಿದ್ದು, ಬಿಟ್ಟು ಬಿಟ್ಟು ಬೀಸುವ ಗಾಳಿಯೊಂದಿಗೆ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ.

 ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಮಳೆ

ಭಾನುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 35.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬೆಳ್ತಂಗಡಿಯಲ್ಲಿ 52.8 ಮಿ.ಮೀ. ದಾಖಲಾಗಿದೆ. ಸುಳ್ಯ 22.4 ಮಿ.ಮೀ, ಬಂಟ್ವಾಳ 34.4 ಮಿ.ಮೀ, ಮಂಗಳೂರು 24.8 ಮಿ.ಮೀ, ಪುತ್ತೂರು 30.8 ಮಿ.ಮೀ, ಮೂಡುಬಿದಿರೆ 24.4 ಮಿ.ಮೀ, ಕಡಬ 11.9 ಮಿ.ಮೀ, ಮೂಲ್ಕಿ 9.9 ಮಿ.ಮೀ., ಉಳ್ಳಾಲದಲ್ಲಿ 34.7 ಮಿಮಿ ಮಳೆ ವರದಿಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ನದಿ (ಬಂಟ್ವಾಳ) 5.53 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.8 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 78.295 ಮೀ, ಗುರುಪುರ ನದಿ (ಅಡ್ಡೂರು) 2.26 ಮೀ ನೀರಿದೆ.

 ಮಳೆ ಕ್ಷೀಣ ಸಾಧ್ಯತೆ

ಪ್ರಸ್ತುತ ಅರಬ್ಬಿ ಸಮುದ್ರ ವ್ಯಾಪ್ತಿಯ ಕರ್ನಾಟಕ ಕರಾವಳಿಯ ಕೆಳ ಸ್ತರದಲ್ಲಿ ಉಂಟಾಗಿರುವ ಅಧಿಕ ಒತ್ತಡದ ಪ್ರಭಾವದಿಂದಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಗಾಳಿ ಬೀಸುತ್ತಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಆದರೆ, ಮುಂಬರುವ ದಿನಗಳಲ್ಲಿ ಈ ಅಧಿಕ ಒತ್ತಡವು ಶಿಥಿಲಗೊಳ್ಳಲಿದೆ. ಇದು ಶಿಥಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಎಲ್ನಿನೋ ಪ್ರಭಾವ ಹೆಚ್ಚಾಗಲಿದ್ದು, ಇದರಿಂದಾಗಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯಲಿದೆ. ಮತ್ತೊಂದೆಡೆ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಸದ್ಯ ಒಡಿಸ್ಸಾ ಮತ್ತು ಛತ್ತೀಸಗಡ ರಾಜ್ಯಗಳನ್ನು ತಲುಪಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರ ನೇರ ಪ್ರಭಾವ ಕೂಡ ಕರಾವಳಿ ತೀರದ ಮೇಲಾಗಲಿದ್ದು, ಮುಂಗಾರು ಮತ್ತಷ್ಟು ತಣ್ಣಗಾಗಲು ಕಾರಣವಾಗಲಿದೆ. ಜುಲೈ ಎರಡನೇ ವಾರದಿಂದ ಜನಸಾಮಾನ್ಯರು ಹೆಚ್ಚಿನ ಬಿಸಿಲನ್ನು ಎದುರಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article