ಎಪಿಎಲ್ ಕಾರ್ಡುದಾರರಿಗೂ ಆಯುಷ್ಮಾನ್ ಸೌಲಭ್ಯ ವಿಸ್ತರಣೆ: ಯು.ಟಿ. ಖಾದರ್
ಸುಳ್ಯದಲ್ಲಿ ಸಚಿವ ಯು.ಟಿ.ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನೆ
ಅಧಿಕಾರ ಯಾವತ್ತೂ ಶಾಶ್ವತವಲ್ಲ. ಅಧಿಕಾರವಿರುವಾಗ ಪ್ರಾಮಾಣಿಕವಾಗಿ ಜನಪರವಾಗಿ ಜನಸೇವೆಯ ಕೆಲಸ ಮಾಡುವುದೇ ನಿಜವಾದ ಸೇವೆ. ಜಾತಿ, ಧರ್ಮ, ಪಕ್ಷ ರಹಿತವಾಗಿ ಜನಸೇವಕ ಸೇವೆ ಸಲ್ಲಿಸಿದಾಗ ದುಶ್ಚಟ ಮುಕ್ತ ಮತ್ತು ದ್ವೇಷ ರಹಿತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಪರಸ್ಪರ ಸಾಮರಸ್ಯದಿಂದ ಬದುಕುವುದು ಕೂಡ ಒಂದು ತಾಲೂಕಿಗೆ ಕೊಡುವ ಪ್ಯಾಕೇಜ್. ಆ ಮೂಲಕ ಅಭಿವೃದ್ಧಿ ಸಾಧಿಸಬೇಕು. ರಾಜಕೀಯ ಎಂಬುದು ಚುನಾವಣೆ ಸಂದರ್ಭದಲ್ಲಿ ಮಾತ್ರ ಓಪನ್ ಆಗುವ ಚಾನೆಲ್‌ನಂತೆ, ಚುನಾವಣೆಯ ಬಳಿಕ ಅದು ಅಭಿವೃದ್ಧಿ ಚಾನೆಲ್ ಆಗಿ ಬದಲಾಗಬೇಕು. ಸಾಮರಸ್ಯ ಸಮಾಜ ನಿರ್ಮಾಣ ಆಗಬೇಕಾದರೆ ಸಮಾಜದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು. ತಾಲೂಕಿನ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಬೇಡಿಕೆ ಸಲ್ಲಿಸಿದರೆ ಸರಕಾರದ ಸ್ಪಂದನೆ ಖಂಡಿತವಾಗಿಯೂ ಇದೆ, ಸುಳ್ಯದ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ಸಚಿವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕು ಅರಣ್ಯಗಳಿಂದ ಅವೃತ್ತವಾದ ಕಾರಣ ಅಭಿವೃದ್ಧಿಗೆ ತೊಡಕಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಮಸ್ಯೆಯಾಗಿದೆ. ಕೃಷಿಕರ ಸಮಸ್ಯೆ, ಅಡಕೆ ಹಳದಿ ಮತ್ತು ಎಲೆಚುಕ್ಕಿ ರೋಗ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ವೈದ್ಯರ ನೇಮಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇರ್ಲ್ಜಜೆಗೆ ಏರಿಸಬೇಕು. ಅರಣ್ಯ, ಕಂದಾಯ ಇಲಾಖೆಗಳನ್ನು ಸೇರಿಸಿಕೊಂಡು ಇಲ್ಲಿನ ಹಕ್ಕುಪತ್ರ, ನಿವೇಶನ ರಹಿತರ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಕೆಲಸ ಮಾಡಬೇಕು. ಇದಕ್ಕಾಗಿ ಸಚಿವರು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ದೊರಕಿಸಿಕೊಡಬೇಕು ಎಂದು ಬೇಡಿಕೆ ಮುಂದಿಟ್ಟರು.
ಆಶೀರ್ವಚನ ನೀಡಿದ ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಮಠಾಧೀಶ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಯು.ಟಿ. ಖಾದರ್ ಅವರದ್ದು ಅಹಂಕಾರ ಇಲ್ಲದ ಸರಳ ವ್ಯಕ್ತಿತ್ವ, ತನ್ನ ಸರಳತೆ, ಜನರೊಂದಿಗೆ ಬೆರೆಯುವ ವ್ಯಕ್ತಿತ್ವ, ಅವರು ವಿಧಾನಸಭೆಯ ಸ್ವೀಕರ್ ಆಗಿ, ಸಚಿವರಾಗಿ ದಕ್ಷ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ಅಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಹಾಗು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಭಿನಂದನಾ ಭಾಷಣ ಮಾಡಿದ ಅಭಿನಂದನಾ ಭಾಷಣ ಮಾಡಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಪೇರಡ್ಕ-ಗೂನಡ್ಕ ಜುಮಾ ಮಸೀದಿಯ ಖತೀಬರಾದ ಅಹಮ್ಮದ್ ನಈಮ್ ಮುಅಬರಿ ಫೈಝಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗದ ನಿರ್ದೇಶಕ ಫಾ. ಆದರ್ಶ್ ಜೋಸೆಫ್ ಆಶೀರ್ವಚನ ನೀಡಿದರು.
ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಕಮಿಟಿ ಬಿ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಕೆ.ಸೀತಾರಾಮ ರೈ ಸವಣೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜಿ. ಕೃಷ್ಣಪ್ಪ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಉದ್ಯಮಿ ಕೆ.ಕೃಷ್ಣ ಕಾಮತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಹಿರಿಯ ಪತ್ರಕರ್ತ ಡಾ. ಯು.ಪಿ. ಶಿವಾನಂದ ಅತಿಥಿಯಾಗಿದ್ದರು.
ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಎನ್.ಎ.ರಾಮಚಂದ್ರ, ಜಾಕೆ ಮಾಧವ ಗೌಡ, ಡಾ. ಡಿ.ವಿ. ಲೀಲಾಧರ್, ಕೆ.ಎಂ. ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ದಿನೇಶ್ ಮಡಪ್ಪಾಡಿ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಎಸ್. ಸಂಶುದ್ದೀನ್, ಎಂ. ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಡಾ. ಎನ್.ಎ. ಜ್ಞಾನೇಶ್, ಪಿ.ಸಿ. ಜಯರಾಮ, ಪಿ.ಎಸ್. ಗಂಗಾಧರ, ಚಂದ್ರ ಕೋಲ್ಚಾರ್, ಪಿ.ಎ. ಮಹಮ್ಮದ್, ತಹಶೀಲ್ದಾರ್ ಎಂ. ಮಂಜುಳ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಡಾ. ನಿತಿನ್ ಪ್ರಭು, ಕೆ.ಟಿ. ವಿಶ್ವನಾಥ್, ಪಿ.ಎ. ಮಹಮ್ಮದ್, ಗೀತಾ ಕೋಲ್ಚಾರ್, ಲತಾಶ್ರೀ ಸುಪ್ರೀತ್ ಮೋಂಟಡ್ಕ ಮತ್ತಿತರರು ಉಪಸ್ಥಿತರಿದ್ದರು.
