ಪ್ರಧಾನಿ ಮೋದಿ ಕರೆ ‘ಏಕ್ ಪೇಡ್ ಮಾ ಕೆ ನಾಮ್’ ತಾಯಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ಸಸಿ ನೆಟ್ಟ ಕೇಂದ್ರ ಸಚಿವ ಸುರೇಶ್ ಗೋಪಿ

ಪ್ರಧಾನಿ ಮೋದಿ ಕರೆ ‘ಏಕ್ ಪೇಡ್ ಮಾ ಕೆ ನಾಮ್’ ತಾಯಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ಸಸಿ ನೆಟ್ಟ ಕೇಂದ್ರ ಸಚಿವ ಸುರೇಶ್ ಗೋಪಿ


ಮಂಗಳೂರು: ತಮ್ಮ ತಾಯಿ ವಿ. ಜ್ಞಾನಲಕ್ಷ್ಮಿ ಅಮ್ಮ ಅವರ ಹೆಸರಿನಲ್ಲಿ ’ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಮಾವಿನ ಗಿಡ ನೆಡುವ ಮೂಲಕ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಪ್ರಧಾನಿ ಮೋದಿ ಅವರು ತಾಯಿಯ ಹೆಸರಿನಲ್ಲಿ ಸಸಿ ನೆಡಲು ನೀಡಿದ ಕರೆಗೆ ಚಾಲನೆ ನೀಡಿದರು. 


ಸೋಮವಾರ ಮಂಗಳೂರಿನಲ್ಲಿ ಸ್ವಚ್ಛತಾ ಪಖ್ವಾಡಾ-2026ಕ್ಕೆ ಚಾಲನೆ ನೀಡಿದ ಬಳಿಕ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟರು. ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರು ಸ್ವತಃ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಪರಿಸರ ಸ್ವಚ್ಛತೆಯ ಮಹತ್ವ ಸಾರಿದರು. 

ಬಳಿಕ ಸಾರ್ವಜನಿಕರಿಗೆ ಸ್ವಚ್ಛತೆಯ ಪ್ರತಿಜ್ಞೆ ಬೋಧಿಸಿ, ಕಸ ಎಸೆಯದಿರುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಹಾಗೂ ಮನೆ, ಕಚೇರಿ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಿಸಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸುರೇಶ್ ಗೋಪಿ, ’ಸ್ವಚ್ಛತೆ ಎಂಬುದು ಕೇವಲ ಒಂದು ಅಭಿಯಾನವಲ್ಲ, ಅದು ಸಾರ್ವಜನಿಕ ಕರ್ತವ್ಯ, ನಾಗರಿಕ ಮೌಲ್ಯ ಮತ್ತು ಎಲ್ಲರ ಹಂಚಿಕೆಯ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಮಹಾತ್ಮ ಗಾಂಧಿ ಕಂಡ ಕನಸಾದ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ ಮಿಷನ್ ಮೂಲಕ ಜನಾಂದೋಲನವಾಗಿ ರೂಪಿಸಿದರು. ಆರಂಭದಲ್ಲಿ ದೇಶವನ್ನು ಸ್ವಚ್ಛ ಭಾರತದತ್ತ ಕೊಂಡೊಯ್ಯುವುದು ಗುರಿಯಾಗಿದ್ದರೂ, ಅಂತಿಮವಾಗಿ ಭಾರತವನ್ನು ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರವನ್ನಾಗಿ ರೂಪಿಸುವುದೇ ಗುರಿಯಾಗಿದೆ ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪರಿಣಾಮ ಇಂದು ವಿಶ್ವದ ಅನೇಕ ರಾಷ್ಟ್ರಗಳು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸುತ್ತಿವೆ ಎಂದು ಅವರು ಹೇಳಿದರು. 

ಪ್ರಸ್ತುತ ನಡೆಯುತ್ತಿರುವ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮದ ಅಂಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸ್ವತಃ ಭಾಗವಹಿಸುತ್ತಿರುವುದಾಗಿ ತಿಳಿಸಿದ ಸಚಿವರು, 15 ದಿನಗಳ ಅಭಿಯಾನದ ಅವಧಿಯಲ್ಲಿ ಕನಿಷ್ಠ 10 ರಾಜ್ಯಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉದ್ದೇಶ ಹೊಂದಿದ್ದೇನೆ. ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಚಿವಾಲಯದ ಇತರೆ ಪ್ರತಿನಿಧಿಗಳು ಈ ಅಭಿಯಾನವನ್ನು ಮುನ್ನಡೆಸಲಿದ್ದಾರೆ ಎಂದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ; ಸಮಾಜದಲ್ಲಿ ಸ್ವಚ್ಛತೆಯ ಬಗ್ಗೆ ಶಾಶ್ವತ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮವನ್ನು ರಾಮಕೃಷ್ಣ ಮಠ, ಮಂಗಳೂರು ಸಹಯೋಗದಲ್ಲಿ ಆಯೋಜಿಸಿರುವ ಎಂಆರ್ಪಿಎಲ್‌ನ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸಮಾಜ ಮತ್ತು ಪರಿಸರದ ಬಗ್ಗೆಯೂ ಸಂಸ್ಥೆ ತನ್ನ ಬದ್ಧತೆಯನ್ನು ತೋರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ ಅವರು, ಅದರ ಹಿಂದೆ ಸ್ಥಳೀಯ ಆಡಳಿತ, ಎಂಆರ್ಪಿಎಲ್, ರಾಮಕೃಷ್ಣ ಮಠ, ಸ್ವಯಂಸೇವಕರು ಹಾಗೂ ಸಾರ್ವಜನಿಕರ ನಿರಂತರ ಪ್ರಯತ್ನಗಳಿವೆ ಎಂದರು. 

ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರವು ದೇಶದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಕೈಗಾರಿಕೆಗಳು ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸಮುದಾಯ ಕಲ್ಯಾಣ ಮತ್ತು ಸುಸ್ಥಿರ ಅಭಿವೃದ್ಧಿಯತ್ತವೂ ಸಮಾನ ಬದ್ಧತೆ ಹೊಂದಿರಬೇಕು ಎಂದು ಹೇಳಿದರು. 

ನಗರವನ್ನು ಸ್ವಚ್ಛವಾಗಿಡಲು ಮೌನವಾಗಿ ದುಡಿಯುತ್ತಿರುವ ಪೌರಕಾರ್ಮಿಕರು ಹಾಗೂ ನೆಲಮಟ್ಟದ ಸಿಬ್ಬಂದಿಯ ಸೇವೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ಸಚಿವರು, "ಅವರ ಪರಿಶ್ರಮಕ್ಕೆ ಸಮಾಜ ಸದಾ ಗೌರವ ಮತ್ತು ಕೃತಜ್ಞತೆ ಸಲ್ಲಿಸಬೇಕು" ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾಗಿ ಬೆಳೆದಿದ್ದು, ಅದರ ನಿಜವಾದ ಶಕ್ತಿ ’ಜನರ ಭಾಗಿತ್ವ’ದಲ್ಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅವರು ಎಲ್ಲರಿಂದ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದರು. "ನಾವು ಕಸ ಎಸೆಯುವುದಿಲ್ಲ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುತ್ತೇವೆ, ಮನೆ, ಕಚೇರಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುತ್ತೇವೆ ಮತ್ತು ಇತರರನ್ನೂ ಅದೇ ದಾರಿಯಲ್ಲಿ ಪ್ರೇರೇಪಿಸುತ್ತೇವೆ" ಎಂದು ಪ್ರತಿಜ್ಞೆ ಬೋಧಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜಿ, ಶಾಸಕ ವೇದವ್ಯಾಸ ಕಾಮತ್, ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್, ನಿರ್ದೇಶಕ (ರಿಫೈನರಿ) ನಂದಕಿಶೋರ್ ಪಿಳ್ಳೈ. ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರುಡಾಲ್ಫ್ ವಿ.ಜೆ. ನರೋನ್ಹ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article