ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: 27ರಂದು ಯುವ ಕಾಂಗ್ರೆಸ್‌ನಿಂದ ಪ್ರತಿಭಟನಾ ಮೆರವಣಿಗೆ
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪಗಳಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೂ ಧಕ್ಕೆಯಾಗಿದೆ ಎಂದರು.
ವೈದ್ಯರಾಗುವ ಕನಸಿನೊಂದಿಗೆ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಪೋಷಕರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ವಿದ್ಯಾರ್ಥಿಗಳ ಪರಿಶ್ರಮವನ್ನು ವ್ಯರ್ಥಗೊಳಿಸುತ್ತಿವೆ ಎಂದು ಅವರು ಹೇಳಿದರು.
2026ರ ಮೇ 3ರಂದು ನಡೆದ ನೀಟ್ ಪರೀಕ್ಷೆಯ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಹಿಂದೆ ಕೂಡ ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ಆರೋಪಗಳು ಕೇಳಿಬಂದಿದ್ದರೂ ತಪ್ಪಿತಸ್ಥರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿರುವುದು ಕಾಣುತ್ತಿಲ್ಲ ಎಂದು ಅವರು ದೂರಿದರು.
ಮರುಪರೀಕ್ಷೆ ನಡೆಸುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮೊದಲ ಪರೀಕ್ಷೆಯಲ್ಲಿ ದೇಶದಲ್ಲಿ 22 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರೆ, ಮರು ಪರೀಕ್ಷೆಯಲ್ಲಿ 20 ಲಕ್ಷ ಮಂದಿ ಬರೆದಿದ್ದರು. ಸುಮಾರು 2 ಲಕ್ಷ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮೆಡಿಕಲ್ ಹಬ್ ಆಗಿ ಗುರುತಿಸಿಕೊಂಡಿರುವ ದ.ಕ. ಜಿಲ್ಲೆಯಲ್ಲಿ 8587 ವಿದ್ಯಾರ್ಥಿಗಳು ಮೊದಲ ಪರೀಕ್ಷೆ ಬರೆದಿದ್ದರೆ, ಮರು ಪರೀಕ್ಷೆ ಬರೆದವರು ೪೩೪೩ ಮಂದಿ ಮಾತ್ರ. ಅರ್ಧಕರ್ಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ ಎಂಬುದು ಆಘಾತಕಾರಿ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ವಿದ್ಯಾರ್ಥಿಗಳು ಇಂತಹ ವಿಚಾರಧಾರೆಗಳ ಬಗ್ಗೆ ಒಂದು ತಿಂಗಳಿನಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೆ ಸಚಿವರಿಗೆ ಅವರ ಬೇಡಿಕೆ ಈಡೇರಿಸಲು ಸಮಯ ಸಿಕ್ಕಿಲ್ಲ ಎಂಬ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸುಮಾರು 28ರಿಂದ 30 ಲಕ್ಷ ರೂ.ಗಳಿಗೆ ಮಾರಾಟಮಾಗಿರುವುದು ಬಿಜೆಪಿ ನೇತೃತ್ವದ ಸರಕಾರವಿರುವ ಮಹಾರಾಷ್ಟ್ರ, ಗುಜರಾತ್, ಬಿಹಾರ ರಾಜ್ಯಗಳಲ್ಲಿ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಕೆಲವರನ್ನು ಬಂಧಿಸಲಾಗಿದೆ. ಅವರು ತಾವು ಸಣ ಮೀನುಗಳು ಮಾತ್ರ ದೊಡ್ಡ ಮೀನುಗಳನ್ನು ಹಿಡಿಯುವುದು ಅಸಾಧ್ಯ ಎಂಬುದನ್ನು ಬಂಧಿತರು ಹೇಳಿಕೊಂಡಿದ್ದಾರೆ. ಹಾಗಿರುವಾಗ ಆ ದೊಡ್ಡ ವ್ಯಕ್ತಿಗಳು, ರಾಜಕೀಯ ಶಕ್ತಿ ಯಾವುದು ಎಂಬುದನ್ನು ಶಿಕ್ಷಣ ಸಚಿವರು ದೇಶದ ಮುಂದೆ ಪ್ರಸ್ತಾವಿಸಬೇಕು ಎಂದು ಅವರು ಆಗ್ರಹಿಸಿದರು.
ದೆಹಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸುವ ಬದಲು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ, ಮೊಳೆ ಹಾಕಿದ ಲಾಠಿ, ಪೊಲೀಸ್ ಇಲಾಖೆಯಲ್ಲಿಲ್ಲದವರಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಅವಕಾಶ ನೀಡಿರುವುದು ಇವೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಇಬ್ರಾಹಿಂ ನವಾಝ್ ಒತ್ತಾಯಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪಾರದರ್ಶಕ ಹಾಗೂ ನಿಷ್ಪಕ್ಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಪ್ರತಿಭಟನೆಯ ಪ್ರಮುಖ ಬೇಡಿಕೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಸಿಫ್, ಪೃಥ್ವಿರಾಜ್, ಹಿತೇಶ್, ಸಮರ್ಥ ಭಟ್, ತೌಸಿಫ್ ಉಪಸ್ಥಿತರಿದ್ದರು.