ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದ ಕ್ರಮಕ್ಕೆ ಡಿವೈಎಫ್ಐ ಖಂಡನೆ

ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದ ಕ್ರಮಕ್ಕೆ ಡಿವೈಎಫ್ಐ ಖಂಡನೆ

ಮಂಗಳೂರು: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಕಳೆದ 20 ದಿನಗಳಿಂದ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದಿರುವ ಕ್ರಮವನ್ನು ಭಾರತದ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. 

ಸೋನಂ ಅವರ ಶಾಂತಿಯುತ ಉಪವಾಸ ಸತ್ಯಾಗ್ರಹದ ಇಪ್ಪತ್ತು ದಿನಗಳ ನಂತರ ನಡೆದಿರುವ ಈ ಅಧಿಕಾರ ದುರುಪಯೋಗದ ಕ್ರಮವು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಹಾಗೂ ಶಾಂತಿಯುತ ಪ್ರತಿಭಟನೆಯ ಸಂವಿಧಾನಬದ್ಧ ಹಕ್ಕಿನ ಮೇಲಿನ ನಾಚಿಕೆಗೇಡಿನ ದಾಳಿಯಾಗಿದೆ.

ಕಳೆದ ಇಪ್ಪತ್ತು ದಿನಗಳಿಂದ ಸೋನಂ ವಾಂಗ್ಚುಕ್ ಅವರು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಅನೇಕ ವಿದ್ಯಾರ್ಥಿಗಳೂ ಸಹ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾಕಾರರೊಂದಿಗೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಸಂವಾದ ನಡೆಸುವ ಬದಲು, ಕೇಂದ್ರ ಸರ್ಕಾರವು ಪೊಲೀಸ್ ಕ್ರಮದ ಮೂಲಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮಾರ್ಗವನ್ನು ಆರಿಸಿಕೊಂಡಿದೆ.

ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ವಶಕ್ಕೆ ಪಡೆಯುವುದು ನಮ್ಮ ದೇಶದ ಪ್ರಜಾಸತ್ತಾತ್ಮಕ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿರುವ ಸರ್ಕಾರವು ಶಾಂತಿಯುತ ಪ್ರತಿಭಟನೆಗಳಿಗೆ ಸಂವಾದ ಮತ್ತು ಹೊಣೆಗಾರಿಕೆಯ ಮೂಲಕ ಸ್ಪಂದಿಸಬೇಕು; ಬಲಪ್ರಯೋಗ ಮತ್ತು ಬೆದರಿಕೆಯ ಮೂಲಕವಲ್ಲ. ಭಿನ್ನಾಭಿಪ್ರಾಯಗಳನ್ನು ಮಣಿಸಲು ಪೊಲೀಸ್ ಬಲವನ್ನು ಹೆಚ್ಚಾಗಿ ಬಳಸುತ್ತಿರುವುದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ದುರ್ಬಲಗೊಳಿಸುವ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

ಸೋನಂ ವಾಂಗ್ಚುಕ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಡಿವೈಎಫ್ಐ ಆಗ್ರಹಿಸುತ್ತದೆ. ಅಲ್ಲದೆ, ದಮನದ ಮಾರ್ಗವನ್ನು ಅನುಸರಿಸುವ ಬದಲು ಪ್ರತಿಭಟನಾಕಾರರೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ. ಪ್ರಜಾಸತ್ತಾತ್ಮಕ ಧ್ವನಿಗಳನ್ನು ಬಲಪ್ರಯೋಗದಿಂದ ಮೌನಗೊಳಿಸಲು ಸಾಧ್ಯವಿಲ್ಲ. ಶಾಂತಿಯುತ ಪ್ರತಿಭಟನೆಯ ಹಕ್ಕು ಜೀವಂತ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದೆ. ಪ್ರಜಾಸತ್ತಾತ್ಮಕ ಧ್ವನಿ ಹತ್ತಿಕ್ಕುವ ಕೇಂದ್ರ ಬಿಜೆಪಿ ಸರಕಾರದ ಈ ದಮನಕಾರಿ ಪ್ರಯತ್ನಗಳು ಮುಂದುವರೆದರೆ ದೇಶವ್ಯಾಪಿ ಧೃಡ ಹಾಗೂ ತೀವ್ರತೆರನಾದ ಪ್ರತಿರೋಧ ಚಳುವಳಿಯು ನಡೆಯುತ್ತದೆ ಎಂದು ಡಿವೈಎಫ್ಐ ಎಚ್ಚರಿಸುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article