ವೈದ್ಯರ ವರ್ಗಾವಣಾ ಕೌನ್ಸೆಲಿಂಗ್ ನಿಯಮಕ್ಕೆ ತಿದ್ದುಪಡಿ: ಯು.ಟಿ. ಖಾದರ್
ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಚಾರ ಹೇಳಿದರು.
ಕಳೆದ ಬಾರಿ ಜಾರಿಗೆ ತಂದಿರುವ ಕೌನ್ಸೆಲಿಂಗ್ ನಿಯಮದಂತೆ ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಪ್ರಸಕ್ತ ಅದೇ ಮಾನದಂಡದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿ ದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಹಾಗಾಗಿ ಈ ಹಂತದಲ್ಲಿ ಏನೂ ಬದಲಾವಣೆ ಮಾಡುವುದಿಲ್ಲ. ಈ ಕೌನ್ಸೆಲಿಂಗ್ ನಿಯಮದಲ್ಲಿ ಪತಿ-ಪತ್ನಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ, ಅಂಗವಿಕಲರ ವರ್ಗಾವಣೆ ಸೇರಿದಂತೆ ಕೆಲವೊಂದು ನ್ಯೂನತೆಗಳಿವೆ. ಇದು ಆಡಳಿತಾತ್ಮಕವಾಗಿ ಪ್ರಯೋಜನ ಎನಿಸಿದರೂ ಸಾಮಾನ್ಯರಿಗೆ ತೊಂದರೆಗೆ ಕಾರಣವಾಗುತ್ತಿದೆ. ಹೀಗಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಸಿಗುವಂತಾಗಲು ಕೌನ್ಸೆಲಿಂಗ್ ನಿಯಮದಲ್ಲಿ ತಿದ್ದುಪಡಿ ತರಬೇಕಾಗಿದೆ. ಈ ಬಗ್ಗೆ ಪರಾಮರ್ಶೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಗಾವಣೆ ವೇಳೆಗೆ ಕೌನ್ಸೆಲಿಂಗ್ ನಿಯಮಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಚಿಕಿತ್ಸೆ ಉಚಿತವಾದರೂ ಡಿಸ್ಚಾರ್ಜ್ ವೇಳೆ ಬಿಲ್!:
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು, ಅದಕ್ಕಾಗಿ ಸರ್ಕಾರ ಎಷ್ಟು ಶ್ರಮ ವಹಿಸಿದೆ, ಓರ್ವ ರೋಗಿಗೆ ಎಷ್ಟು ಮೊತ್ತ ಖರ್ಚು ಮಾಡುತ್ತದೆ ಎಂಬುದು ದಾಖಲಾಗುವ ಎಲ್ಲ ರೋಗಿಗಳಿಗೂ ಗೊತ್ತಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ರೋಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಗೆ ಹೋಗುವಾಗ ಅವರ ಚಿಕಿತ್ಸೆಗೆ ಒಟ್ಟು ಎಷ್ಟು ವೆಚ್ಚ ತಗುಲಿದೆ ಎಂಬ ಬಗ್ಗೆ ಸಮಗ್ರ ಬಿಲ್ ನೀಡಲಾಗುತ್ತದೆ. ಆದರೆ ಮೊತ್ತ ಪಡೆಯುವುದಿಲ್ಲ, ಅದು ಮೊತ್ತ ಪಾವತಿ ರಹಿತ ಬಿಲ್ ಆಗಿರುತ್ತದೆ. ಈ ಮಾದರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದಲೇ ಆರಂಭವಾಗಲಿದ್ದು, ಇದನ್ನು ರಾಜ್ಯದ ಎಲ್ಲ ಕಡೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಎಂಆರ್‌ಐ ಸ್ಕ್ಯಾನಿಂಗ್‌ಗೆ ಬಳಸುವ ಹೀಲಿಯಂ ಕೆಮಿಕಲ್ ಈಗ ಮಧ್ಯಪ್ರಾಚ್ಯ ಯುದ್ಧದ ಸನ್ನಿವೇಶದಿಂದ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಹಳೆ ಮಿಷಿನ್‌ನಲ್ಲಿ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸಿಬ್ಬಂದಿಯ ಅಹವಾಲು ಆಲಿಸಿದ ಸಚಿವ ಯು.ಟಿ. ಖಾದರ್, ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವೆ ನ್ಲಾಕ್ ಆಸ್ಪತ್ರೆಯಲ್ಲಿ ನೀಡುವ ದರದಲ್ಲೇ ಕೆಎಂಸಿ ಆಸ್ಪತ್ರೆಯವರು ಎಂಆರ್‌ಐ ಸ್ಕ್ಯಾನಿಂಗ್ ಮಾಡಿ ಕೊಡುವಂತೆ ಸೂಚನೆ ನೀಡಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿರುವ ವೈದ್ಯರು, ಸಿಬ್ಬಂದಿ ಹಾಗೂ ನರ್ಸ್ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಡಿಎಚ್‌ಒ ಡಾ. ತಿಮ್ಮಯ್ಯ, ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಇದ್ದರು.