ಸಂಕ್ರಮಣ ಕಾಲದಲ್ಲಿರುವ ಭಾರತದ ವಿದ್ಯಾರ್ಥಿ ಚಳುವಳಿಯನ್ನು ಎಸ್ ಎಫ್ ಐ ಮುನ್ನಡೆಸಬೇಕಾಗಿದೆ: ಡಾ. ಗಣನಾಥ ಶೆಟ್ಟಿ ಎಕ್ಕಾರು
Saturday, July 25, 2026
ಮಂಗಳೂರು: ಭಾರತ ಇಂದು ಸಂಕ್ರಮಣ ಕಾಲದಲ್ಲಿದ್ದು, ಕಳೆದ ಎರಡು ದಶಕಗಳಿಂದ ತೆರೆಗೆ ಸರಿದಿದ್ದ ವಿದ್ಯಾರ್ಥಿ ಚಳುವಳಿಯು ಮತ್ತೆ ಚುರುಕುಗೊಂಡಿದೆ. ಸಂವಿಧಾನವನ್ನು ಒಡೆಯುವ ಶಕ್ತಿಗಳ ವಿರುದ್ಧ ವಿದ್ಯಾರ್ಥಿಗಳು ಎದ್ದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ದೇಶದಲ್ಲಿ ಪ್ರಗತಿಪರ, ಪುರೋಗಾಮಿ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವದ ಚಿಂತನೆಗಳ ಅರಿವಿರದೆ ಯಾವುದೇ ಚಳುವಳಿಯನ್ನು ಸರಿಯಾದ ದೃಷ್ಟಿಯಲ್ಲಿ ಮುನ್ನಡೆಸಲು ಸಾಧ್ಯವಿಲ್ಲ. ಇಂದು ನೈಜ್ಯ ಚಿಂತನೆಯ ಕೊರತೆ ಯುವಜನ ಸಮುದಾಯಕ್ಕಿದೆ. ನೈಜ್ಯ ಚಿಂತನೆಯೆಂದರೆ ಅವುಗಳು ಕ್ಲಿಷ್ಟ ಚಿಂತನೆಗಳಲ್ಲ.ನೈಜ್ಯ ಚಿಂತನೆಯೆಂದರೆ ವಿಶ್ವ ಮಾನವ ಚಿಂತನೆಯೇ ಆಗಿದೆ.ಭಿನ್ನ ಕಾರಣಕ್ಕಾಗಿ ನಿರಾಕರಣೆಯಾಗುತ್ತಿರುವ ಹಕ್ಕುಗಳನ್ನು ಗೌರವಿಸುವುದು ನೈಜ್ಯ ಚಿಂತನೆಯಾಗಿದೆ. ಭಾರತ ಸಂವಿಧಾನವು ಬೋದಿಸುವ ನೈಜ್ಯ ಚಿಂತನೆಯನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಜನಪದ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಅವರು ಇಂದು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ SFI ನೇತೃತ್ವದಲ್ಲಿ ಜರುಗಿದ ದ.ಕ. ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಔಪಚಾರಿಕ ಶಿಕ್ಷಣವೊಂದೇ ಕಲಿಕೆಯ ಉದ್ದೇಶವಾಗಿರಬಾರದು. ಬಹುಗುಣಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಭೌತವಾದ, ಸಂಪ್ರದಾಯವಾದ, ವಿಸೃತವಾದ,ಬಂಡವಾಳಶಾಹಿ, ಎಡಪಂಥ, ಬಲಪಂಥಗಳೆಂಬ ಪಾರಿಭಾಷಿಕ ಶಬ್ದಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಸ್ವಾತಂತ್ರ್ಯ ಚಳುವಳಿಯಿಂದಾಗಿ 1920 ರ ನಂತರದಲ್ಲಿ ರಾಷ್ಟ್ರೀಯವಾದ ಹುಟ್ಟಿಕೊಂಡಿತು. ಈ ರಾಷ್ಟ್ರೀಯವಾದದೊಂದಿಗೆ ಸ್ವಾತಂತ್ರ್ಯ, ಬ್ರಾತೃತ್ವ, ಸಮಾನತೆಯನ್ನು ನಾವು ಚಳುವಳಿಗಳ ಮೂಲಕ ನಾವು ಉಳಿಸಿಕೊಳ್ಳುತ್ತಾ ಮುನ್ನಡೆದೆವು ಆದರೆ 1992 ರ ನಂತರ ಭಾರತದ ಸಾರ್ವಜನಿಕ ವಲಯವನ್ನು ಬಂಡವಾಳಿಗರ ಕೖಗೆ ಒಪ್ಪಿಸುವ ಮೂಲಕ ಸಂವಿಧಾನದ ಆಶಯಗಳನ್ನು ಸಡಿಲವಾಗಿಸಿದೆವು.
2014 ರ ನಂತರದ ಆಡಳಿತವು ಭಾರತದಲ್ಲಿ ಧರ್ಮವನ್ನು ಗುರಾಣೆಯನ್ನಾಗಿಸಿ ಖಾಸಗೀಕರಣವನ್ನು ಇನ್ನಷ್ಟು ಪ್ರಭಲವಾಗಿ ಮುನ್ನಡೆಸಿದ ಪರಿಣಾಮವಾಗಿ ಇಂದಿನ ರಾಜಕಾರಣವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಖರೀದಿಸಿದೆ ಹಾಗಾಗಿ ಅಳಿದು ಹೋಗುತ್ತಿರುವ ಚಳುವಳಿಗಳನ್ನು ಉಳಿಸಿದರೆ ಮಾತ್ರ ಸಂವಿಧಾನವು ಉಳಿಯುತ್ತದೆ.ಈ ನಿಟ್ಟಿನಲ್ಲಿ ಎಸ್ ಎಫ್ ಐ ಶ್ರಮಿಸುತ್ತಿದ್ದು, ಅಭ್ಯಾಸ ಮತ್ತು ಹೋರಾಟದ ಘೋಷಣೆಯು ಅಂಬೇಡ್ಕರ್ ರವರ ಒಗ್ಗಟ್ಟಾಗಿ ಮತ್ತು ತಿಳಿದುಕೊಳ್ಳಿ ಎಂಬ ತತ್ವಕ್ಕೆ ಹತ್ತಿರವಾಗಿದೆ. ಬೌಧಿಕ ಚಿಂತನೆಗಳಿಲ್ಲದೆ ಹೋರಾಟ ಸಾಧ್ಯವಿಲ್ಲ ಎಂದು ಹೇಳಿದರು.
ಭಾರತ ವಿದ್ಯಾರ್ಥಿ ಫೆಡರೇಶನ್(SFI)ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ಮಾತನಾಡಿ, ಎಸ್ ಎಫ್ ಐ ಸ್ವಾತಂತ್ರ್ಯ ಚಳುವಳಿಯ ಜಾತ್ಯಾತೀತ ಜಾತ್ಯಾತೀತ ತತ್ವಗಳನ್ನು ಮುನ್ನಡೆಸುತ್ತಿದೆ. ಇಂದಿನ ಬೀದಿಗಿಳಿದ ವಿದ್ಯಾರ್ಥಿ ಚಳುವಳಿಯು ಸಂವಿಧಾನದ ಹಕ್ಕುಗಳನ್ನಷ್ಟೇ ಕೇಳುತ್ತಿದೆ. ಆದರೆ ಕೇಂದ್ರ ಸರಕಾರವು ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿಗಳನ್ನೇ ಭಯೋತ್ಪಾದಕರನ್ನಾಗಿ ಬಿಂಬಿಸುತ್ತಿದೆ ಎಂದರು
ದೆಹಲಿ ವಿವಿಯ SFI ನಾಯಕರಾದ ಶಾಲಿಕಾ ಮಾತನಾಡುತ್ತಾ,ಸುಳ್ಳನ್ನು ಸತ್ಯವಾಗಿಸುವುದು ಇಂದಿನ ರಾಜಕಾರಣದ ರಹದಾರಿ. ಸಮಾಜದಲ್ಲಿ ಚರ್ಚೆಯಲ್ಲಿರುವ ಜನರನ್ನು ಭಾದಿಸುವ ಜೀವಂತ ವಿಷಯಗಳನ್ನು ರಾಜಕಾರಣಿಗಳಾಗಲೀ, ಲೋಕಸಭೆಯಲ್ಲಾಗಲೀ ಪ್ರತಿನಿಧಿಗಳು ಮಾತನಾಡುವುದಿಲ್ಲ ಯಾಕೆಂದರೆ ಜನತೆಯ ದ್ವನಿಗಳನ್ನು ಗೌಣವಾಗಿಸುವುದು ಇಂದಿನ ಸರಕಾರದ ಕೆಲಸ ಎಂದರು.
ಸಮಾವೇಶದ ಸಮಾರೋಪ ಭಾಷಣವನ್ನು DYFI ಜಿಲ್ಲಾ ಕಾರ್ಯದರ್ಶಿಯಾದ ಸಂತೋಷ್ ಬಜಾಲ್ ರವರು ಮಾಡಿದರು.ವೇದಿಕೆಯಲ್ಲಿ SFI ಜಿಲ್ಲಾ ನಾಯಕರಾದ ವಿನಾಯಕ ಮಂಗಳೂರು,ವಿನುಶ ರಮಣ, ಬಿ. ಕೆ ಇನಾಝ್, ದ. ಕ ಜಿಲ್ಲಾ ಸರ್ವ ಪದವಿ ಕಾಲೇಜು ವಿದ್ಯಾರ್ಥಿಗಳ ಸಮನ್ವಯ ಸಮಿತಿಯ ಅಧ್ಯಕ್ಷರಾದ ರೋನ್ಸನ್ ಡಿ`ಸೋಜ, ಕಾರ್ಯದರ್ಶಿ ಮಹಮ್ಮದ್ ಅಜ್ಲಾನ್,ಸರ್ವ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇಶಾನ್ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಮುದಾಯ ಅನುಭವಿಸುವ ಹಲವಾರು ವಿಚಾರಗಳ ಬಗ್ಗೆ ನಿರ್ಣಯಗಳನ್ನು ಕೈಗೊಂಡ ಸಮಾವೇಶವು ಮುಂದಿನ ವರ್ಷಕ್ಕೆ ನೂತನ SFI ದ.ಕ.ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು.




