ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ವಿದ್ಯಾರ್ಥಿ ಯುವಜನರ ಐಕ್ಯ ಹೋರಾಟಕ್ಕೆ ಸಂದ ಜಯ: ಡಿವೈಎಫ್‌ಐ
ಮಂಗಳೂರು: ನೀಟ್ ಹಗರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಕೊನೆಗೂ ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿರುವುದು ದೇಶದ ಲಕ್ಷಾಂತರ ವಿದ್ಯಾರ್ಥಿ ಯುವಜನರ ಐಕ್ಯ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಹಗರಣವನ್ನು ವಿರೋಧಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಸುದೀರ್ಘ ಹಾಗೂ ತೀವ್ರ ಸ್ವರೂಪದ ಹೋರಾಟಕ್ಕೆ ಕೊನೆಗೂ ಅಭೂತಪೂರ್ವ ಜಯ ಸಿಕ್ಕಿದೆ. ದೇಶಾದ್ಯಂತ ಭುಗಿಲೆದ್ದಿದ್ದ ತೀವ್ರ ಆಕ್ರೋಶ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಐತಿಹಾಸಿಕ ಧರಣಿಗೆ ಮಣಿದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜು.೨೫ ರಂದು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಮಹತ್ವದ ಬೆಳವಣಿಗೆಯು ಕೇವಲ ಒಬ್ಬ ಸಚಿವರ ರಾಜೀನಾಮೆಯಲ್ಲ, ಬದಲಿಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಬಯಸಿ ಬೀದಿಗಿಳಿದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಸಾಮೂಹಿಕ ಹೋರಾಟಕ್ಕೆ ಸಂದ ಜಯವಾಗಿದೆ.
ದೇಶದಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಹಾಗೂ ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆಗಳು ಜಂಟಿಯಾಗಿ ನಡೆಸಿದ ಸಂಘಟಿತ ಹೋರಾಟದ ಪ್ರಮುಖ ಬೇಡಿಕೆ ಸಚಿವರ ರಾಜೀನಾಮೆಯಾಗಿತ್ತು. ಇಂದು ಈ ಬೇಡಿಕೆ ಈಡೇರಿರುವುದು ಜಂತರ್ ಮಂತರ್‌ನಲ್ಲಿ ಮತ್ತು ದೇಶದ ಪ್ರತಿಯೊಂದು ಯುವಮನಸ್ಸುಗಳಲ್ಲಿ ವಿಜಯೋತ್ಸವದ ವಾತಾವರಣವನ್ನು ಸೃಷ್ಟಿಸಿದೆ.
ಶಿಕ್ಷಣ ಸಚಿವರ ರಾಜೀನಾಮೆ ನಮಗೆ ಸಂದ ಮೊದಲ ದೊಡ್ಡ ಗೆಲುವಾಗಿದ್ದರೂ, ಹೋರಾಟ ಇಲ್ಲಿಗೇ ಮುಗಿಯುವುದಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಪರೀಕ್ಷಾ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಒದಗಿಸುವುದು ಸೇರಿದಂತೆ ಉಳಿದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮಾತುಕತೆಗಳು ಮತ್ತು ನಮ್ಮ ಹಕ್ಕೊತ್ತಾಯಗಳು ಮುಂದುವರಿಯಲಿದೆ. ಇಂದಿನ ಈ ದಿನವು ಭಾರತದ ಪ್ರಜಾಪ್ರಭುತ್ವದಲ್ಲಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹಾಗೂ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.