ಕರಾವಳಿಯಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ: ಮುಂದಿನ ದಿನಗಳಲ್ಲಿ ವಾಯುಭಾರ ಕುಸಿತದಿಂದ ಮತ್ತೆ ಚುರುಕು?

ಕರಾವಳಿಯಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ: ಮುಂದಿನ ದಿನಗಳಲ್ಲಿ ವಾಯುಭಾರ ಕುಸಿತದಿಂದ ಮತ್ತೆ ಚುರುಕು?

ಮಂಗಳೂರು: ಕರಾವಳಿಯುದ್ದಕ್ಕೂ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಭಾರೀ ಮಳೆಯ ಪ್ರಮಾಣದಲ್ಲಿ ಭಾನುವಾರ ಕೊಂಚ ಇಳಿಮುಖ ಕಂಡುಬಂದಿದೆ. ದಿನವಿಡೀ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಸಾರ್ವಜನಿಕರು ಸ್ವಲ್ಪ ಮಟ್ಟಿನ ನಿರಾಳತೆ ಅನುಭವಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ದಿನದ ಬಹುತೇಕ ಸಮಯ ಮೋಡಮುಸುಕಿದ ವಾತಾವರಣವಿತ್ತು. ಆದರೆ ಸಂಜೆ ವೇಳೆಗೆ ವಾತಾವರಣ ಬದಲಾಗಿ ಗುಡುಗು ಮತ್ತು ಬಿರುಗಾಳಿ ಸಹಿತ ಉತ್ತಮ ಮಳೆಯಾದ ವರದಿಯಾಗಿದೆ. ಭಾನುವಾರ ಬೆಳಿಗ್ಗೆವರೆಗಿನ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಸರಾಸರಿ 47.9 ಮಿ.ಮೀ ಮಳೆ ದಾಖಲಾಗಿದೆ. ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನೆಯಂತೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯ ಹಲವೆಡೆ ಸೋಮವಾರ ಬೆಳಿಗ್ಗೆ ಸಾಧಾರಣ ಮಳೆಯಾಗಲಿದ್ದು, ಮಧ್ಯಾಹ್ನದ ನಂತರ ಬಿಟ್ಟು ಬಿಟ್ಟು ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ.

ಜಿಲ್ಲೆಯ ಗರಿಷ್ಠ ಮಳೆ ಮೂಡುಬಿದಿರೆ 74.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 53.0 ಮಿ.ಮೀ  ಬಂಟ್ವಾಳ 57.6 ಮಿ.ಮೀ, ಉಳ್ಳಾಲದಲ್ಲಿ 25.0 ಮಿಮಿ, ಕಡಬದಲ್ಲಿ 37.8 ಮಿಮಿ, ಪುತ್ತೂರು 30.0 ಮಿ.ಮೀ, ಮಂಗಳೂರಿನಲ್ಲಿ 38.8 ಮಿಮಿ, ಸುಳ್ಯದಲ್ಲಿ 46.8 ಮಿ.ಮೀ., ಮೂಲ್ಕಿ 59.1 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 5.590 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 25.20 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.395 ಮೀ, ಗುರುಪುರ ನದಿ (ಅಡ್ಡೂರು) 2.200 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ವಾಯುಭಾರ ಕುಸಿತದ ಪ್ರಭಾವ:

 ಎಲ್ ನಿನೋ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಒಟ್ಟಾರೆಯಾಗಿ ಕೊಂಚ ದುರ್ಬಲವಾಗಿದ್ದರೂ, ಕಾಲಕಾಲಕ್ಕೆ ಉಂಟಾಗುತ್ತಿರುವ ವಾಯುಭಾರ ಕುಸಿತಗಳು ಕರಾವಳಿ ಭಾಗಕ್ಕೆ ಸಮೃದ್ಧ ಮಳೆಯನ್ನು ತರುತ್ತಿವೆ. ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಪ್ರಸ್ತುತ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮದಿಂದಾಗಿ ಮುಂದಿನ 10 ದಿನಗಳ ಕಾಲ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯಲ್ಲಿ ಸರ್ಭವಿಸಿರುವ ಈ ವಾಯುಭಾರ ಕುಸಿತವು ಜುಲೈ 27ರ ವೇಳೆಗೆ ಉತ್ತರ ರಾಜ್ಯಗಳ ಮೂಲಕ ಚಲಿಸುವ ಸಾಧ್ಯತೆಗಳಿವೆ, ಇದರ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article