ಹದಗೆಡುತ್ತಿರುವ ಒಳಚರಂಡಿ ವ್ಯವಸ್ಥೆ-ಸಮಗ್ರ ಒಳಚರಂಡಿ ಯೋಜನೆಗೆ ಶಿಫಾರಸು: ಐವನ್ ಡಿಸೋಜಾ

ಹದಗೆಡುತ್ತಿರುವ ಒಳಚರಂಡಿ ವ್ಯವಸ್ಥೆ-ಸಮಗ್ರ ಒಳಚರಂಡಿ ಯೋಜನೆಗೆ ಶಿಫಾರಸು: ಐವನ್ ಡಿಸೋಜಾ

ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ತೀವ್ರವಾಗಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ ಕುರಿತಂತೆ ಸಾರ್ವಜನಿಕ ಉದ್ಯಮಗಳ ಸಮಿತಿಯು ಸಮಗ್ರ ಒಳಚರಂಡಿ ಯೋಜನೆಗೆ ಪೂರಕವಾಗಿ ಕಾಲಮಿತಿಯ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ತನ್ನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಮಂಡಲಗಳ 20 ಮಂದಿ ಶಾಸಕರನ್ನು ಒಳಗೊಂಡ ಈ ಸಮಿತಿಯು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಧಾರದಲ್ಲಿ ನೀಡಿರುವ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ ಎಂದರು. 

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡಲು ನಗರಾಭಿವೃದ್ಧಿ ಇಲಾಖೆಯು ಸರಕಾರಕ್ಕೆ ಪತ್ರೆ ಬರೆದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಿದರು. 

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ತ್ವರಿತ ನಗರೀಕರಣ ಹಾಗೂ ಸಮರ್ಪಕ ನೈರ್ಮಲ್ಯ ಮೂಲಸೌಕರ್ಯಗಳ ಅಗತ್ಯತೆ ಪರಿಗಣಿಸಿ ಗುರುತಿಸಲಾದ ಪ್ರದೇಶಗಳಲ್ಲಿ ಭೂಗತ ಒಳರಂಡಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು ಅಗತ್ಯವಾಗಿದೆ. 

ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಪರಿಸರ ಸಂಬಂಧಿ ಸಮಸ್ಯೆಗಳು, ಅನೈರ್ಮಲ್ಯ ಪರಿಸ್ಥಿತಿ, ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆಗಳು ಉಂಟಾಗಿವೆ. ಕಾಮಗಾರಿಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸದಿರುವುದರಿಂದ ಸಾರ್ವಜನಿಕ ಆರೋಗ್ಯ ಸುಧಾರಣೆ, ನೀರು ನಿಲ್ಲುವ ಸಮಸ್ಯೆ ತಡೆಗಟ್ಟುವುದು, ನೈರ್ಮಲ್ಯ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಉತ್ತೇಜನ ನೀಡುವುದು ಸಾಧ್ಯವಾಗುತ್ತದೆ ಎಂದು ಶಿಫಾರಸು ಮಾಡಿರುವ ಸಮಿತಿಯು, ಪ್ರಸಕ್ತ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. 

ಇದರಿಂದ ಜಲಮೂಲಗಳು ಕಲುಷಿತವಾಗುತ್ತಿದೆ. ಈ ವಿಸ್ತೃತ ಯೋಜನೆ ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬೇಕಾಗಿರುವ ಅಗತ್ಯ ಕಾಮಗಾರಿಗಳನ್ನು ಸೇರಿಸಬೇಕು ಎಂದು ಉಲ್ಲೇಖಿಸಿದೆ. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಹಲವಾರು ನ್ಯೂನ್ಯತೆಗಳಿದ್ದು ಸಿಎಜಿಯವರು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿ ವರದಿ ಮಾಡಿದಾದರೆ. 

ಹೊಸ ಸಮಗ್ರ ಯೋಜನೆಯಲ್ಲಿ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ದುಂದು ವೆಚ್ಚ ತಡೆಯಬೇಕು. ಪ್ರಸ್ತಾವಿತ ಸಮಗ್ರ ಯೋಜೆಗೆ ಸುಮಾರು 1250 ಕೋಟಿ ರೂ. ಅಗತ್ಯವಿರುವುದಾಗಿ ಪಾಲಿಕೆ ತಿಳಿಸಿದೆ. ಯೋಜನೆಗೆ ಡಿಪಿಆರ್ ತಯಾರಸಿ ಅಗತ್ಯ ಆಡಳಿತಾತ್ಮಕ ಅನುಮೋದನೆಗಳು, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರಕಾರ ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಪ್ರಕಾಶ್ ಸಾಲಿಯಾನ್, ಭಾಸ್ಕರ ರಾವ್, ಮೀನಾ ಟೆಲ್ಲಿಸ್, ನಾಗೇಂದ್ರ ಕುಮಾರ್, ರೆಹಮಾನ್, ನವೀನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article