ಉರ್ವಸ್ಟೋರ್ ಮಾರುಕಟ್ಟೆ, ನಿರ್ವಹಣೆ ಕೊರತೆ, ಸ್ವಚ್ಛತಾ ವೈಫಲ್ಯ: ಸಾರ್ವಜನಿಕ ಆರೋಗ್ಯ ಆತಂಕ
ಪ್ರತಿನಿತ್ಯ ಸಾವಿರಾರು ಮಂದಿ ವ್ಯಾಪಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಭೇಟಿ ನೀಡುವ ಈ ಮಾರುಕಟ್ಟೆಯಲ್ಲಿ ಮುಕ್ತ ಚರಂಡಿಗಳು, ನಿಂತ ನೀರು, ಕಸದ ರಾಶಿಗಳು ಹಾಗೂ ಅಸ್ವಚ್ಛ ಸಾರ್ವಜನಿಕ ಶೌಚಾಲಯಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಮಾರುಕಟ್ಟೆಯ ಒಳಭಾಗದಲ್ಲಿ ಚರಂಡಿಗಳ ಮೇಲ್ಭಾಗದ ಕಾಂಕ್ರೀಟ್ ಸ್ಲ್ಯಾಬ್‌ಗಳು ಮುರಿದು ಬಿದ್ದಿರುವುದು ಕಂಡುಬಂದಿದೆ. ಹಲವು ಕಡೆ ಚರಂಡಿ ನೀರು ಹೊರಹರಿಯುತ್ತಿದ್ದು, ಮೀನು ಹಾಗೂ ಮಾಂಸ ಮಾರಾಟ ನಡೆಯುವ ಪ್ರದೇಶಗಳ ಸುತ್ತಮುತ್ತ ನೀರು ನಿಂತು ದುರ್ವಾಸನೆ ವ್ಯಾಪಿಸಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರ ಬಳಕೆಗೆ ಇರುವ ಶೌಚಾಲಯಗಳ ಸ್ಥಿತಿಯೂ ತೀರಾ ಹದಗೆಟ್ಟಿದ್ದು, ಸಮರ್ಪಕ ಸ್ವಚ್ಛತೆ ಮತ್ತು ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯಗಳ ಹೊರಭಾಗದಲ್ಲಿ ಕಸ ರಾಶಿಯಾಗಿ ಬಿದ್ದಿರುವುದು, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ಸುತ್ತಮುತ್ತ ನಿಂತಿರುವ ನೀರು ಆರೋಗ್ಯದ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ಒಂಬತ್ತು ವರ್ಷಗಳಿಂದ ಮಟನ್ ವ್ಯಾಪಾರ ನಡೆಸುತ್ತಿರುವ ಅಸ್ಲಾಂ ಅವರು, “ಮಾರುಕಟ್ಟೆಯಲ್ಲಿ ಸ್ವಚ್ಛತೆ ಮತ್ತು ಚರಂಡಿ ನಿರ್ವಹಣೆಯ ಸಮಸ್ಯೆ ಹಲವು ವರ್ಷಗಳಿಂದ ಇದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಚರಂಡಿ ನೀರು ನಿಂತು ದುರ್ವಾಸನೆಯಾಗುತ್ತಿದೆ. ಗ್ರಾಹಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ 51 ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿರುವ ಗಿರಿಜಾ ಅವರು, “ಬೆಳಗ್ಗೆಯಿಂದ ಸಂಜೆವರೆಗೆ ನಾವು ಇಲ್ಲೇ ಕೆಲಸ ಮಾಡುತ್ತೇವೆ. ಮಹಿಳಾ ವ್ಯಾಪಾರಿಗಳು ಮತ್ತು ಗ್ರಾಹಕರು ಶೌಚಾಲಯ ಬಳಸಬೇಕಾದರೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆಯ ಕೊರತೆಯಿಂದ ದುರ್ವಾಸನೆ ಹರಡಿದ್ದು, ಮಹಿಳೆಯರಿಗೆ ಅಸೌಕರ್ಯ ಉಂಟಾಗಿದೆ. ಮಳೆ ಬಂದಾಗ ನೀರು ನಿಂತು ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರ ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮಹಿಳಾ ವ್ಯಾಪಾರಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿದರು.
ಮಾರುಕಟ್ಟೆಯ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮುಕ್ತ ಚರಂಡಿಗಳ ದುರಸ್ತಿ, ಕಸದ ಸಮರ್ಪಕ ವಿಲೇವಾರಿ, ಶೌಚಾಲಯಗಳ ನಿರಂತರ ನಿರ್ವಹಣೆ ಹಾಗೂ ಸಮಗ್ರ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಉರ್ವಾಸ್ಟೋರ್ ಮಾರುಕಟ್ಟೆಯ ಈ ದುಸ್ಥಿತಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.