ಡ್ರಗ್ಸ್ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ: ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಅಭಿಯಾನ

ಡ್ರಗ್ಸ್ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರ: ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಅಭಿಯಾನ


ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಮೂಲಕ ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರದ ಸಮಗ್ರ ಅಭಿಯಾನದಂತೆ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ. 2025ರಿಂದ ಈವರೆಗೆ ಕಮಿಷನರೇಟ್ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ 1,216 ಎನ್ಡಿಪಿಎಸ್ ಪ್ರಕರಣ ದಾಖಲಿಸಲಾಗಿದ್ದು, 1,679 ಮಂದಿಯ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಜಂಟಿಯಾಗಿ ತಿಳಿಸಿದ್ದಾರೆ.

ಗುರುವಾರ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷರ್ ಸುಧೀರ್ ಕುಮಾರ್ ರೆಡ್ಡಿ, 2025ರಲ್ಲಿ 717 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 231 ಮಾರಾಟಗಾರರ ಹಾಗೂ 723 ಸೇವಿಸಿದವರ ಬಂಧಿಸಲಾಗಿದೆ, ಇದರಲ್ಲಿ ಒರ್ವ ವಿದೇಶಿ ಪ್ರಜೆ. 2026ರ ಜು.15ರವರೆಗೆ 426 ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, 142 ಮಾರಾಟಗಾರರು ಮತ್ತು 438 ಸೇವಿಸಿದವರ ಬಂಧಿಸಲಾಗಿದೆ. 2025ರಲ್ಲಿ 7.50 ಕೋಟಿ ರು. ಮೌಲ್ಯದ 324.074 ಕೆ.ಜಿ. ಡಗ್ಸ್ ಮತ್ತು 6.017 ಕೆ.ಜಿ. ಸಿಂಥೆಟಿಕ್ ಡ್ರಗ್ಸ್, 2026ರ ಜು.15ರ ವರೆಗೆ 8.08 ಕೋಟಿ ರು. ಮೌಲ್ಯದ 150.329 ಕೆ.ಜಿ. ಗಾಂಜಾ ಮತ್ತು 7.072 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ವಶಪಡಿಸಲಾಗಿದೆ ಎಂದರು.

2026ರಲ್ಲಿ 2,616 ಕಾಲೇಜು ವಿದ್ಯಾರ್ಥಿಗಳ ಡ್ರಗ್ಸ್ ಸೇವನೆ ಬಗ್ಗೆ ಟೆಸ್ಟ್ ಮಾಡಲಾಗಿದ್ದು, 63 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದಿದೆ. ಮಂಗಳೂರು ನಗರ ವ್ಯಾಪ್ತಿಯ 174 ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ 101 ಶಿಕ್ಷಣ ಸಂಸ್ಥೆಗಳಲ್ಲಿ ಆಂಟಿ ಡ್ರಗ್ ಕಮಿಟಿ ರಚಿಸಲಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಸಮಯ ಸ್ವಯಂ ಪ್ರೇರಿತವಾಗಿ ಘೋಷಣಾ ಪತ್ರ ಪಡೆಯಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ, ಮಾದಕ ದ್ರವ್ಯ ಪರೀಕ್ಷೆ ಬಗ್ಗೆ ಮೊಬೈಲ್ ಫಾರೆನ್ಸಿಕ್ ಲ್ಯಾಬ್ ಬಳಕೆ ಮಾಡಲಾಗುತ್ತಿದೆ, ಮಾದಕದ್ರವ್ಯ ಸಾಗಾಟ ಮತ್ತು ಸಂಗ್ರಹದ ಪತ್ತೆಗೆ ವಿಶೇಷವಾಗಿ ತರಬೇತಿ ಪಡೆದ ಶ್ವಾನದಳವನ್ನು ಬಳಸಲಾಗುತ್ತಿದೆ ಎಂದರು.

‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಎಂಬ ಹೆಸರಿನಲ್ಲಿ ಕರ್ನಾಟಕ ಸರ್ಕಾರ ರಾಜ್ಯವ್ಯಾಪಿ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಜೂ.30ರಂದು ಆರಂಭಿಸಲಾಗಿದ್ದು, ‘ಬೇಡ ಬ್ರೋ’ ಅಭಿಯಾನ ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಮಾದಕ ವ್ಯಸನದಿಂದ ದೂರವಿರಲು ಪ್ರೇರೇಪಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ಮಾದಕ ವಸ್ತುಗಳ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.

ಎಸ್ಪಿ ಡಾ.ಅರುಣ್ ಮಾತನಾಡಿ, ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2025ರಲ್ಲಿ 29 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 33 ಮಾರಾಟಗಾರರು ಮತ್ತು 20 ಸೇವಿಸಿದವರ ಬಂಧಿಸಲಾಗಿದೆ. 2026ರ ಜು.15ರ ವರೆಗೆ 44 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 44 ಮಾರಾಟಗಾರರು ಮತ್ತು 48 ಸೇವಿಸಿದವರ ಬಂಧಿಸಲಾಗಿದೆ. 2025ರಲ್ಲಿ 3.61 ಲಕ್ಷ ರು.ಮೌಲ್ಯದ 14.49 ಕೆ.ಜಿ. ಗಾಂಜಾ, 67.06 ಗ್ರಾಂ ಸಿಂಥೆಟಿಕ್ ಡ್ರಗ್ಸ್ ಹಾಗೂ 2026ರಲ್ಲಿ 1.11 ಕೋಟಿ ರು.ಮೌಲ್ಯದ 106 ಕೆ.ಜಿ. ಗಾಂಜಾ, 656.36 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಪಡಿಸಲಾಗಿದೆ ಎಂದರು.

ಡಿಸಿಪಿಗಳಾದ ಮಿಥುನ್ ಕುಮಾರ್, ರವಿಶಂಕರ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article