ಮಳೆ ರಜೆ ಆದೇಶ ಪಾಲಿಸದ ಶಾಲೆಗಳಿಗೆ ನೋಟಿಸ್
ಮಂಗಳೂರು: ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರೂ, ಮಂಗಳೂರು ಸೇರಿದಂತೆ ಬಹುತೇಕ ಕಡೆ ವಸತಿಯುತ ಖಾಸಗಿ ಶಾಲೆಗಳು ರಜೆ ನೀಡದೆ ತರಗತಿ ನಡೆಸಿವೆ. ಮೂರು ಬಾರಿಯೂ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಜಿಲ್ಲಾಡಳಿತ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ಕಾರಣ ಕೇಳಿ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.
ಈ ಬಾರಿ ವಿಳಂಬವಾಗಿಯೇ ಮಳೆ ಆರಂಭವಾಗಿದ್ದು ಒಂದು ತಿಂಗಳ ಬಳಿಕ ಮಳೆ ಜೋರಾಗಿದೆ. ರೆಡ್ ಅಲರ್ಟ್ ಘೋಷಣೆ ಮಾಡಿರುವುದು ಕೂಡ ಬಹಳ ಕಡಿಮೆ. ಆದರೆ ಕಳೆದೊಂದು ವಾರದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲೆ ಮತ್ತು ಪಿಯು ವರೆಗಿನ ಕಾಲೇಜುಗಳಿಗೆ ಮೂರು ರಜೆಗಳನ್ನು ಘೋಷಣೆ ಮಾಡಿತ್ತು. ಆದರೆ ಈ ರಜೆ ಆದೇಶ ಉಲ್ಲಂಘಿಸಿ ಕೆಲವು ಖಾಸಗಿ ಶಾಲೆಗಳಲ್ಲಿ ತರಗತಿ ನಡೆಸಲಾಗಿದೆ ಎಂದು ದೂರು ಬಂದಿದ್ದು, ಹತ್ತಕ್ಕೂ ಹೆಚ್ಚು ಶಾಲೆ, ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿದೆ.
ಮೊದಲ ರಜೆ ಘೋಷಣೆ ಮಾಡಿದಾಗಲೇ ಬಹಳಷ್ಟು ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿ ಬಳಿಕ ತರಗತಿಗಳನ್ನು ನಡೆಸಿದ್ದವು. ವಿಷಯ ತಿಳಿದು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಶಾಲೆ, ಕಾಲೇಜುಗಳಿಗೆ ಎಚ್ಚರಿಕೆ ರವಾನಿಸಿದ್ದರು. ಎರಡನೇ ಬಾರಿ ರಜೆ ಘೋಷಣೆ ಮಾಡಿದಾಗಲೂ ಇದೇ ರೀತಿಯಾಗಿದ್ದು ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸಲಾಗಿತ್ತು. ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘನೆಯಾಗಿದ್ದರಿಂದ ಸದರಿ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ನಲ್ಲಿ ಯಾವ ಕಾರಣಕ್ಕೆ ರಜೆ ನೀಡಿಲ್ಲ ಎನ್ನುವ ವಿವರವನ್ನು ಏಳು ದಿನಗಳ ಒಳಗೆ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾಡಳಿತದ ರಜೆ ಆದೇಶ ಉಲ್ಲಂಘಿಸಿದ ಶಾಲೆ, ಕಾಲೇಜುಗಳ ಬಗ್ಗೆ ದೂರು ನೀಡಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದ.ಕ. ಜಿಲ್ಲಾಡಳಿತಕ್ಕೆ ಅನೇಕ ವಿದ್ಯಾರ್ಥಿಗಳು ದೂರವಾಣಿ ಮತ್ತು ಇತರ ಮೂಲಗಳ ಮೂಲಕ ದೂರುಗಳನ್ನು ನೀಡಿದ್ದು ಇದನ್ನು ಆಧರಿಸಿ ನೋಟಿಸ್ ಜಾರಿಗೊಳಿಸಲಾಗಿದೆ.