ದೇಶದಲ್ಲಿ ಗೋ ಹತ್ಯೆ ಸಂಪೂರ್ಣವಾಗಿ ನಿಷೇಧಿಸಬೇಕು: ಶ್ರೀ ಸಾಯಿ ಈಶ್ವರ್ ಗುರೂಜಿ

ದೇಶದಲ್ಲಿ ಗೋ ಹತ್ಯೆ ಸಂಪೂರ್ಣವಾಗಿ ನಿಷೇಧಿಸಬೇಕು: ಶ್ರೀ ಸಾಯಿ ಈಶ್ವರ್ ಗುರೂಜಿ


ಮಂಗಳೂರು: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಸೇರಿದಂತೆ ಗೋವುಗಳ ರಕ್ಷಣೆಯ ಉದ್ದೇಶದಿಂದ ರಾಷ್ಟ್ರದಾದ್ಯಂತ ಗೋಮಾತೆಯ ಗೌರವದ ಅಭಿಯಾನ ನಡೆಯುತ್ತಿದ್ದು, ಎರಡನೇ ಹಂತದ ಹೋರಾಟದ ಅಂಗವಾಗಿ ಜು.27ರಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಭಿಯಾನದ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ ನೇತೃತ್ವ ವಹಿಸಿರುವ ಉಡುಪಿ ಜಿಲ್ಲೆಯ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದರು.

ಗೋ ಸಮ್ಮಾನ್ ಆಹ್ವಾನ ಅಭಿಯಾನವು ರಾಷ್ಟ್ರಮಟ್ಟದ ದೊಡ್ಡ ಹೋರಾಟವಾಗಿದೆ. ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂಬ ಉದ್ದೇಶದಿಂದ ನಾಲ್ಕು ಹಂತದಲ್ಲಿ ಅಭಿಯಾನ ನಡೆಯುತ್ತಿದೆ. ಮೊದಲ ಹಂತವಾಗಿ ತಾಲೂಕು ಮಟ್ಟದ ಅಭಿಯಾನ ನಡೆಸಲಾಗಿದೆ. ಸಂಗ್ರಹಿಸಿದ ಸಹಿಯೊಂದಿಗೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದ್ದು, ಈ ಅಭಿಯಾನ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿತ್ತು. ಇದೀಗ ಎರಡನೇ ಹಂತದ ಹೋರಾಟ ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಉಡುಪಿ ಜಿಲ್ಲೆಯ 7 ತಾಲೂಕಿನ ಗೋ ಪ್ರೇಮಿಗಳು, ಗೋ ರಕ್ಷಕರು, ಗೋ ಭಕ್ತರು ಮತ್ತು ಸಮಸ್ತ ಹಿಂದೂ ಸಮಾಜ ಬಾಂಧವರೊಂದಿಗೆ ಸೇರಿ ಮನವಿ ಸಲ್ಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ಹಂತದಲ್ಲಿ ಅಕ್ಟೋಬರ್‌ನಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಯಲಿದ್ದು, 2027ರ ಜನವರಿಯಲ್ಲಿ ರಾಷ್ಟ್ರಮಟ್ಟದ ಮಹಾ ಅಭಿಯಾನ ನಡೆಯಲಿದೆ. ಯಾವುದೇ ಹಂತದಲ್ಲಿ ಹೋರಾಟಕ್ಕೆ ಜಯ ದೊರೆತಲ್ಲಿ ಹೋರಾಟ ಕೈಬಿಟ್ಟು ಸಾಧು ಸಂತರು, ಗೋಭಕ್ತರು ಆಡಳಿತಕ್ಕೆ ಗೌರವ ಸಲ್ಲಿಸಲಿದ್ದೇವೆ. ಒಂದು ವೇಳೆ ಈ ಹೋರಾಟಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗದಿದ್ದರೆ ಮುಂದಿನ ಹಂತದಲ್ಲಿ ದೇಶದ 108 ಜನ ಸಾಧು ಸಂತರು 2027ರ ಏಪ್ರಿಲ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗೋವಿಗೆ ರಾಷ್ಟ್ರಮಾತೆ, ರಾಷ್ಟ್ರೀಯ ದೇವತೆಯ ಸ್ಥಾನಮಾನ ಸಿಗಬೇಕು. ಗೋ ಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು, ಗೋ ಸೇವೆಗಾಗಿ ಕೇಂದ್ರೀಯ ಸಚಿವಾಲಯವನ್ನು ಸ್ಥಾಪಿಸಬೇಕು. ಗೋ ಚಾರ ಮಂಡಳಿಯನ್ನು ರಚಿಸಬೇಕು, ಮೇವು ಭದ್ರತಾ ನೀತಿಯನ್ನು ಅಂತಿಮಗೊಳಿಸಬೇಕು, ಗೋವು ಆಧಾರಿತ ಕೃಷಿಯನ್ನು ಖಚಿತಪಡಿಸಿಕೊಳ್ಳಬೇಕು. ಭಾರತೀಯ ಸ್ಥಳೀಯ ಗೋತಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸಬೇಕು, ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ಹೆಚ್ಚಿಸಬೇಕು ಎಂಬುದು ಅಭಿಯಾನದ ಉದ್ದೇಶವಾಗಿದೆ ಎಂದು ಶ್ರೀ ಸಾಯಿ ಈಶ್ವರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ್ ಬೈಂದೂರು, ಧನರಾಜ್ ಮಂಗಳೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article