ಮೂಡುಬಿದಿರೆಯಲ್ಲಿ SSR ಕಾರ್ಯ ಚುರುಕು
ಮೂಡುಬಿದಿರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 201-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ಕಾರ್ಯ ಪ್ರಗತಿಯಲ್ಲಿದೆ. 2026ರ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸುವ ಹಾಗೂ ಡಿಜಿಟೈಸೇಶನ್ ಮಾಡುವ ಕಾರ್ಯ ನಡೆಸುತ್ತಿದ್ದಾರೆ.
ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಯವರ ಕಾರ್ಯಾಲಯದಿಂದ ಗುರುವಾರ ಸಂಜೆ 4 ಗಂಟೆಗೆ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,981 ಮತದಾರರಿದ್ದು, ಈವರೆಗೆ 1,93,505 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಇದು ಒಟ್ಟು ಮತದಾರರ ಶೇ.92.59ರಷ್ಟಾಗಿದೆ. ಇದೇ ಅವಧಿಯಲ್ಲಿ 8,360 ಫಾರ್ಮ್‌ಗಳನ್ನು ಡಿಜಿಟೈಸೇಶನ್ ಮಾಡಲಾಗಿದ್ದು, ಇದು ಶೇ.4ರಷ್ಟಿದೆ.
ಪರಿಷ್ಕರಣೆ ವೇಳೆ ಒಟ್ಟು 73 ಯು.ಇ.ಎಫ್. (UEF/ASDD) ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 50 ಮರಣ ಹೊಂದಿರುವ ಮತದಾರರು, 13 ಖಾಯಂವಾಗಿ ವಲಸೆ ಹೋಗಿರುವ ಮತದಾರರು, 8 ಈಗಾಗಲೇ ನೋಂದಾಯಿಸಲ್ಪಟ್ಟ ಮತದಾರರು, ಒಬ್ಬ ಗೈರುಹಾಜರಾದ ಮತದಾರ ಹಾಗೂ ಒಬ್ಬ ಇತರೆ ವರ್ಗಕ್ಕೆ ಸೇರಿದ ಪ್ರಕರಣ ದಾಖಲಾಗಿದೆ.
ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಯವರ ಕಾರ್ಯಾಲಯವು ಮತದಾರರು ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದೆ.