ಮಾನವೀಯತೆ ಇಲ್ಲದ ಶಿಕ್ಷಣ ನಿರರ್ಥಕ: ಡಾ. ಆಂಟನಿ ಪ್ರಕಾಶ್
Friday, July 31, 2026
ವಿಶ್ವ ಮಾನವ ಕಳ್ಳಸಾಗಾಣೆ ವಿರುದ್ಧದ ದಿನಾಚರಣೆ
ಪುತ್ತೂರು: ಸಂತ ಫಿಲೋಮಿನ ಸ್ವಾಯತ್ತ ಕಾಲೇಜಿನಲ್ಲಿ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಕ್ಲಬ್ ಹಾಗೂ ಇಂಗ್ಲಿಷ್ ವಿಭಾಗದ ಸಹಯೋಗದೊಂದಿಗೆ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ವಂ. ಡಾ ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ಗೌರವದಿಂದ ಬದುಕುವ ಹಕ್ಕನ್ನು ಹೊಂದಿದ್ದಾನೆ. ಮೌಲ್ಯ ಆಧಾರಿತ ಶಿಕ್ಷಣವೇ ನಮ್ಮ ಯುವಕರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುತ್ತದೆ. ಮಾನವೀಯತೆ ಇಲ್ಲದ ಶಿಕ್ಷಣ ನಿರರ್ಥಕ. ಮಾನವ ಕಳ್ಳಸಾಗಣೆಯಂತಹ ಸಮಸ್ಯೆಯನ್ನು ಬೇರುಮಟ್ಟದಿಂದ ಕಿತ್ತುಹಾಕಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ಅವರು ಮಾನವ ಕಳ್ಳಸಾಗಣೆಯ ಕಾರಣಗಳು, ಪರಿಣಾಮಗಳು ಮತ್ತು ಅದನ್ನು ತಡೆಯುವ ಮಾರ್ಗಗಳ ಬಗ್ಗೆ ವಿಚಾರಗಳನ್ನು ಮಂಡಿಸಿ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗದ ಜನರು ಹೇಗೆ ಈ ಜಾಲಕ್ಕೆ ಬಲಿಯಾಗುತ್ತಾರೆ ಎಂಬುದನ್ನು ನೈಜ ಉದಾಹರಣೆಗಳೊಂದಿಗೆ ವಿವರಿಸಿದರು. ಜಾಗೃತಿ ಮತ್ತು ಶಿಕ್ಷಣವೇ ಈ ದುಷ್ಟತನವನ್ನು ಮಣಿಸುವ ಅಸ್ತ್ರ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಡುವ ಪ್ರತಿಜ್ಞೆಯನ್ನು ಬೋಧಿಸಿದರು.
ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಧೆ ಹಾಗೂ ಮಾನವ ಕಳ್ಳಸಾಗಣೆ ವಿರೋಧಿ ಕ್ಲಬ್ ಸದಸ್ಯ ಕಾರ್ಯದರ್ಶಿ ಡಾ. ಭಾರತಿ ಎಸ್ ರೈ ಹಾಗೂ ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ., ರಿಜಿಸ್ಟ್ರಾರ್ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಮಾನಸ ಮತ್ತು ಅಪರ್ಣ ಪ್ರಾರ್ಥಿಸಿ, ವಿಂಧ್ಯಾಶ್ರೀ ರೈ ಸ್ವಾಗತಿಸಿ, ಸುಷ್ಮಾ ವಾಗ್ಲೆ ವಂದಿಸಿದರು. ಕಾರ್ಯಕ್ರಮವನ್ನು ಆಯಿಷಾತ್ ಜಬೀನ ನಿರೂಪಿಸಿದರು.


