ಕಲಿಕೆಯ ನಿಖರತೆಗೆ ಅತ್ಯಾಧುನಿಕ ಮೌಲ್ಯಮಾಪನ ಪೂರಕ: ಎಸ್.ಎನ್. ಕಾಕತ್ಕರ್

ಕಲಿಕೆಯ ನಿಖರತೆಗೆ ಅತ್ಯಾಧುನಿಕ ಮೌಲ್ಯಮಾಪನ ಪೂರಕ: ಎಸ್.ಎನ್. ಕಾಕತ್ಕರ್


ಉಜಿರೆ: ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯ ವಿಸ್ತರಿಸುವಂತಹ ಮೌಲ್ಯಮಾಪನ ವಿಧಾನವನ್ನು ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಮರುರೂಪಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಶೈಕ್ಷಣಿಕ ಸಂಯೋಜಕ ಎಸ್.ಎನ್. ಕಾಕತ್ಕರ್ ಹೇಳಿದರು.

ಅವರು ಎಸ್.ಡಿ.ಎಂ. ಕಾಲೇಜಿನ ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್ ಮತ್ತು ರಿಸರ್ಚ್-ಡೆವಲಪ್‌ಮೆಂಟ್ ಘಟಕ ಜಂಟಿಯಾಗಿ ಆಯೋಜಿಸಿದ ‘ಫಲಿತಾಂಶ ಆಧಾರಿತ ಬೋಧನಾ ವಿಧಾನದ ಮೂಲಕ ಉನ್ನತ ಶಿಕ್ಷಣದ ಮರುವ್ಯಾಖ್ಯಾನ’ ಕುರಿತು ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಾಪಕರಿಗಾಗಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಜು.25 ರಂದು ಒಂದು ದಿನದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚರ್ಚೆ, ಸಂವಾದ ಮತ್ತು ನಿರ್ದಿಷ್ಟ ವಿಷಯದ ಕುರಿತು ಈಗಾಗಲೇ ಇರುವ ಜ್ಞಾನ ವಿಸ್ತರಿಸಿದ ನಂತರ ನಿರೀಕ್ಷೆಗೆ ಅನುಗುಣವಾಗಿಯೇ ಫಲಿತಾಂಶ ವ್ಯಕ್ತವಾಗಬೇಕು. ವಿದ್ಯಾರ್ಥಿಗಳಲ್ಲಿ ಪರಿಪೂರ್ಣತೆ ರೂಪಿಸುವುದರ ಜೊತೆಜೊತೆಗೆ ಅದನ್ನು ಅಳೆಯುವ ಮೌಲ್ಯಮಾಪನದ ವಿಧಾನ ಕ್ರಮಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಈ ಕುರಿತ ಕಾರ್ಯತಾಂತ್ರಿಕ ಪರಿಣತಿ ಗಳಿಸಿ ಕಲಿಕೆಯ ಪ್ರಕ್ರಿಯೆಯನ್ನು ನಿರೀಕ್ಷಿತ ಫಲಿತಾಂಶ ಕೇಂದ್ರಿತ ಪ್ರಕ್ರಿಯೆಯನ್ನಾಗಿಸಬೇಕು ಎಂದು ಸಲಹೆ ನೀಡಿದರು.

ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ನಿರಂತರ ಬದಲಾವಣೆಗಳು ಆಗುತ್ತಿರುತ್ತವೆ. ಹೊಸ ಕಾಲದ ತಾಂತ್ರಿಕ ಆವಿಷ್ಕಾರಗಳ ಸ್ವರೂಪಕ್ಕೆ ಅನುಗುಣವಾಗಿ ಕಲಿಕೆ ಮತ್ತು ಮೌಲ್ಯಮಾಪನ ಸಂಬಂಧಿತ ಪರಿಷ್ಕೃತ ವಿಧಾನಗಳನ್ನು ಕಂಡುಕೊಳ್ಳಬೇಕು. ಇದರಿಂದ ಲಭ್ಯವಾಗುವ ಫಲಿತಾಂಶವು ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಅರ್ಥಪೂರ್ಣಗೊಳಿಸುತ್ತದೆ ಎಂದರು.

ತರಗತಿಯಲ್ಲಿ ನಿರ್ದಿಷ್ಟ ವಿಷಯವನ್ನು ಹೊಸ ಪ್ರಶ್ನೆಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಅರ್ಥಕ್ಕೆ ಎಟುಕುವಂತಹ ಹೊಸ ವಿಧಾನ ರೂಪಿಸಿಕೊಳ್ಳಬೇಕು. ಸಂಬಂಧಿತ  ಜ್ಞಾನ ದಾಟಿಸುತ್ತಾ ಒಂದೇ ವಿಷಯವನ್ನು ಹೊಸ ರೀತಿಯಲ್ಲಿ ಹೇಗೆ ತಿಳಿದುಕೊಳ್ಳಬೇಕು ಎನ್ನುವ ಮಾದರಿ ಪ್ರಸ್ತುತಪಡಿಸಬೇಕು. ಆಗ ಮೌಲ್ಯಯುತ ಕಲಿಕೆ ಮತ್ತು ನಿಖರ ಮೌಲ್ಯಮಾನ ಸಾಧ್ಯವಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ ಸಹಾಯಕ ಪ್ರಾಧ್ಯಾಪಕಿ ಡಾ. ಸಂಧ್ಯಾ ಆರ್ ಫಲಿತಾಂಶ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ಮಾತನಾಡಿದರು. 

ಶೈಕ್ಷಣಿಕ ಕಲಿಕೆಯನ್ನು ಇನ್ನಷ್ಟು ನಿಖರವಾಗಿಸುವಂತಹ ವೈವಿಧ್ಯಮಯ ಬೋಧನಾ ವಿಧಾನಗಳ ಸ್ವರೂಪದ ಕುರಿತು ನಾಲ್ಕು ಗೋಷ್ಟಿಗಳನ್ನು ನಿರ್ವಹಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು. ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್ ಸಂಯೋಜಕ ಜಿ.ಆರ್. ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್, ರಿಸರ್ಚ್-ಡೆವಲಪ್‌ಮೆಂಟ್ ಘಟಕದ ನಿರ್ದೇಶಕಿ ಡಾ. ಸೌಮ್ಯ ಬಿ.ಪಿ ವಂದಿಸಿ, ಸಹ ಪ್ರಾಧ್ಯಾಪಕಿ ಡಾ. ನೆಫಿಸತ್ ಪಿ. ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article