ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು: ಪ್ರಕರಣ ದಾಖಲು
ಬಂಟ್ವಾಳ: ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ವಿರುದ್ದ ಆಸ್ಪತ್ರೆಯ ಸೂಚನಾ ಪತ್ರದ ಮೇರೆಗೆ ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಸೆಯ್ಯದ್ ಇಮ್ರಾನ್ ಎಂದು ಹೆಸರಿಸಲಾಗಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಿಂದ ಬಂದ ಸೂಚನಾ ಪತ್ರದ ಮೇರೆಗೆ ಹೇಳಿಕೆ ಪಡೆಯಲೆಂದು ಬಂಟ್ವಾಳ ಪೊಲೀಸರು ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ಪಡೆಯುತ್ತಿದ್ದ ಸೆಯ್ಯದ್ ಇಮ್ರಾನ್ ಎಂಬಾತನನ್ನು ವಿಚಾರಿಸಿದಾಗ ಆಗಸ್ಟ್ 15 ರಂದು ಸಂಜೆ ಬಿಸಿ ರೋಡು ಬಸ್ ನಿಲ್ದಾಣದ ಬಳಿ ಬಸ್ಸಿನಿಂದ ಇಳಿದು ತಾನು ತಂದಿದ್ದ ಎಂಡಿಎಂಎ ಮಾದಕ ವಸ್ತು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಂಡಿರುವುದಾಗಿಯೂ ಈ ಮಾದಕ ವಸ್ತುವನ್ನು ಆತನ ಸ್ನೇಹಿತ ಹಾಸನದ ಜರ್ತಾಬ್ ಎಂಬಾತ ನೀಡಿರುವುದಾಗಿ ತಿಳಿಸಿದ್ದಾನೆ.
ಈತನನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.