ಅಪಾಯಕಾರಿ ಮರಗಳ ತೆರವು ಕಾರ್ಯ: ಅರಣ್ಯ ಇಲಾಖೆ ಸರ್ವೆ, ಮುದ್ರಾಡಿ ಹೆಬ್ರಿ ಸೇರಿ ಹಲವೆಡೆ ಮರಗಳ ತೆರವು ಕಾರ್ಯ
ಮರಗಳ ತೆರವಿಗೆ ಒತ್ತಾಯಿಸಿದ್ದ ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಘಟಕ: ಸಾಮಾಜಿಕ ಹೋರಾಟಗಾರರು
ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಇತ್ತೀಚೆಗೆ ಅಪಾಯಕಾರಿ ಮರಗಳನ್ನು ತೆರವಿಗೆ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿತ್ತು. ಸ್ಥಳೀಯ ಮುಖಂಡರು ಸಾಮಾಜಿಕ ಹೋರಾಟಗಾರರಾದ ಕುಚ್ಚೂರು ಶ್ರೀಕಾಂತ್ ಪೂಜಾರಿ, ಮಿಥುನ್ ಶೆಟ್ಟಿ ಚಾರ, ನವೀನ್ ಕೆ ಅಡ್ಯಂತಾಯ, ಶಂಕರ ಶೇರಿಗಾರ್ ಹೆಬ್ರಿ, ಕನ್ಯಾನ ಸಂತೋಷ ನಾಯಕ್, ಪ್ರವೀಣ್ ಸೂಡ ಕೆರೆಬೆಟ್ಟು, ಪ್ರಶಾಂತ್ ಪೈ ಮುದ್ರಾಡಿ, ಪ್ರೀತಮ್ ಜೆ ಶೆಟ್ಟಿ ಮುದ್ರಾಡಿ, ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು, ಕೆರೆಬೆಟ್ಟು ಸಂಜೀವ ಶೆಟ್ಟಿ, ಸನತ್ ಕುಮಾರ ಶೆಟ್ಟಿ ಬೇಳಂಜೆ, ವಕೀಲ ಕೃಷ್ಣ ಶೆಟ್ಟಿ, ರವಿ ಬೇಳಂಜೆ ಸೇರಿದಂತೆ ಹಲವರು ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರು.
ಇನ್ನೂ ಇವೆ ಅಪಾಯಕಾರಿ ಮರಗಳು: ಒಣಗಿದ ಮರಗಳು!
ಮುದ್ರಾಡಿಯ ಪಾದೆಗುಡ್ಡೆ, ಭೀಮ ನಗರ, ಕೆಲಕಿಲ, ಉಪ್ಪಳ , ಭಕ್ರೆ ಎಂಬಲ್ಲಿ ಅಪಾಯಕಾರಿ ಹಾಗೂ ಸತ್ತು ಹೋಗಿರುವ ಬೀಳುವ ಸ್ಥಿಯಲ್ಲಿರುವ ಮರಗಳಿವೆ ಎಂದು ಪ್ರೀತಮ್ ಜೆ ಶೆಟ್ಟಿ ತಿಳಿಸಿದ್ದಾರೆ. ಬೇಳಂಜೆಯ ತೆಂಕಹೊಲ, ಕೆಪ್ಪೆಕೆರೆ, ಸಳ್ಳೇಕಟ್ಟೆ ಪರಿಸರದಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ ಸನತ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಹೆಬ್ರಿ ಉಡುಪಿ ರಸ್ತೆಯ ಎಸ್.ಕೆ. ಫರ್ನಿಚರ್ ಬಳಿ ಸತ್ತು ಹೋಗಿರುವ ಬೃಹತ್ ಮರ ಬೀಳುವ ಹಂತದಲ್ಲಿದೆ ಎಂದು ಹೆಬ್ರಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕನ್ಯಾನ ಸಂತೋಷ ನಾಯಕ್ ತಿಳಿಸಿದ್ದಾರೆ. ಹೆಬ್ರಿಯ ಕಾರ್ಕಳ ರಸ್ತೆಯ ಗಿಲ್ಲಾಳಿ ಬಸ್ ನಿಲ್ದಾಣದ ಬಳಿ ಅಪಾಯಕಾರಿ ಮರಗಳು, ಶಿವಪುರ ಗೋಳಿಕಟ್ಟೆ ರಸ್ತೆಯಲ್ಲಿ ರಸ್ತೆ ಸಂಪೂರ್ಣವಾಗಿ ವಾಲಿಕೊಂಡಿರುವ ಅಪಾಯಕಾರಿ ಮರಗಳು ಇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೂ ಹಲವೆಡೆ ರಸ್ತೆಗೆ ವಾಲಿರುವ, ಸತ್ತು ಹೋಗಿರುವ ಮರಗಳಿವೆ:
ಹೆಬ್ರಿ ಪರಿಸರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಗ್ರಾಮೀಣ ರಸ್ತೆ, ಗ್ರಾಮ ಪಂಚಾಯಿತಿ ರಸ್ತೆಗಳ ಇಕ್ಕೆಲಗಳಲ್ಲೂ ರಸ್ತೆಗೆ ವಾಲಿಕೊಂಡಿರುವ, ಸತ್ತು ಹೋಗಿರುವ, ಟೊಳ್ಳಾಗಿರುವ ಬೃಹತ್ ಮರಗಳು ಅಪಾಯಕಾರಿಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಸರ್ವೆ ನಡೆಸಿ ಮರಗಳ ತೆರವು ಕಾರ್ಯವನ್ನು ನಡೆಸುವಂತೆ ಒತ್ತಾಯ ಕೇಳಿ ಬಂದಿದೆ.
ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪ್ರಕೃತಿ ವಿಕೋಪದ ವಿಶೇಷ ಸಭೆಯಲ್ಲಿ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಪಾಯಕಾರಿ ಮರಗಳನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದರು.
ಹೆಬ್ರಿ ವಲಯ ಅರಣ್ಯಾಧಿಕಾರಿ ಮತ್ತು ಅವರ ತಂಡದ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಸಂಘಸಂಸ್ಥೆಗಳ ಪ್ರಮುಖರು, ಸಾಮಾಜಿಕ ಹೋರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.