ಕೆಎಸ್‌ಆರ್‌ಟಿಸಿ ಕಂಡಕ್ಟರ್ ಆತ್ಮಹತ್ಯೆ
Tuesday, August 4, 2026
ಕಾಸರಗೋಡು: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ತಾತ್ಕಾಲಿಕ ಕಂಡಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳಿಯಾರ್‌ನಲ್ಲಿ ನಡೆದಿದೆ.
ಮುಳಿಯಾರ್ ಮಜಕ್ಕಾರ್ ನಿವಾಸಿ ಯೋಗೀಶ್ ಎಂ. (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕಳೆದ 18 ವರ್ಷಗಳಿಂದ ಕೆಎಸ್‌ಆರ್ಟಿಸಿ ಸಂಸ್ಥೆಯಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದರು.
ಕಳೆದ ಕೆಲವು ದಿನಗಳಿಂದ ತಮ್ಮ ಉದ್ಯೋಗ ಕೈತಪ್ಪಬಹುದು ಎಂಬ ತೀವ್ರ ಭೀತಿಯಲ್ಲಿದ್ದ ಯೋಗೀಶ್, ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಆತಂಕದಿಂದಾಗಿಯೇ ಅವರು ತಮ್ಮ ಮನೆಯ ಸಮೀಪದ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.