ಕಟೀಲು, ಮರವೂರು, ಪಲಿಮಾರು ಸೇತುವೆಗಳಿಗೆ 98 ಕೋಟಿ ರೂಪಾಯಿ

ಕಟೀಲು, ಮರವೂರು, ಪಲಿಮಾರು ಸೇತುವೆಗಳಿಗೆ 98 ಕೋಟಿ ರೂಪಾಯಿ


ಕಟೀಲು: ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಟೀಲು, ಮರವೂರು, ಪಲಿಮಾರು ಈ ಮೂರು ಸೇತುವೆಗಳು ಸುಮಾರು 98 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣಗೊಳ್ಳಲಿದ್ದು, ಯೋಜನೆ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಶಾಸಕ ಉಮಾನಾಥ ಕೊಟ್ಯಾನ್ ತಿಳಿಸಿದ್ದಾರೆ.

ಕಟೀಲು ಸೇತುವೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಮೀಪ ಇರುವ ನಂದಿನಿ ನದಿಗೆ ಕಟ್ಟಿರುವ ಸೇತುವೆಯನ್ನು 1939ರಲ್ಲಿ ಆಗಿನ ಮೈಸೂರು ಸರಕಾರದ ದಿವಾನರಾಗಿದ್ದ ಮಿರ್ಝ ಮೊಹಮ್ಮದ್ ಇಸ್ಮಾಯಿಲ್ ಅವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ಆಗ 73,200 ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಕಿರಿದಾಗಿದ್ದು, ವಾಹನಗಳ ಓಡಾಟ ತುಂಬ ಹೆಚ್ಚಾಗಿದ್ದು, ಸೇತುವೆಯ ಧಾರಣಾ ಸಾಮರ್ಥ ಅಷ್ಟಾಗಿ ಇಲ್ಲ. ಸೇತುವೆ ಇಕ್ಕಟ್ಟಾಗಿರುವುದರಿಂದ ಮಂಗಳೂರಿನಿಂದ ಕಟೀಲಿಗೆ ಬರುವ ವಾಹನಗಳು ಬ್ಲಾಕ್ ಆಗಿ ಸಮಸ್ಯೆಯಾಗುತ್ತಿತ್ತು, ಇದೀಗ ನೂತನ ಸೇತುವೆಯ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದು ಒಟ್ಟು 33 ಕೋಟಿ ರೂಪಾಯಿ ವೆಚ್ಚದಲ್ಲಿ 16 ಮೀಟರ್ ಅಗಲದಲ್ಲಿ ಈ ಸೇತುವೆ ನಿರ್ಮಾಣವಾಗಲಿದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಬಳ್ಕುಂಜೆ ಸೇತುವೆ

ಬಳ್ಕುಂಜೆ ಕರ್ನಿರೆಯಿಂದ ಉಡುಪಿ ಜಿಲ್ಲೆಯ ಫಲಿಮಾರು ಮೂಲಕ ಸಂಪರ್ಕ ಕಲ್ಪಿಸುವ ಸೇತುವೆ ಅಡಿಭಾಗದಲ್ಲಿ ಬಿರುಕು ಬಿಟ್ಟಿದೆ, ಸಂಚಾರಕ್ಕೆ ಯೋಗ್ಯವಲ್ಲ ಎಂದು ಅಧಿಕಾರಿಗಳು ತಿಳಿಸಿದ ನಂತರ ಕಳೆದ ಒಂದೂವರೆ ವರ್ಷದಿಂದ ಈ ಸೇತುವೆಯಲ್ಲಿ ಘನ ವಾಹನಗಳನ್ನು ನಿಷೇಧಿಸಲಾಗಿದೆ, ಈ ಕಾರಣದಿಂದ ಬಸ್ಸು ಲಾರಿಗಳು ಓಡಾಟ ನಿಲ್ಲಿಸಿವೆ. ಪರಿಣಾಮ ಜನ ಅನುಭವಿಸುತ್ತಿರುವ ಸಂಕಟ ಹೇಳತೀರದು. ಈ ಮಾರ್ಗದಲ್ಲಿ ಒಟ್ಟು 15 ಬಸ್ಸುಗಳು ದಿನನಿತ್ಯ ಸಂಚರಿಸುತ್ತಿದ್ದು, ಈ ಬಸ್ಸುಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ, ಬದಲಿ ಮಾರ್ಗದಲ್ಲಿ ಹೋಗಲು ಮತ್ತು ಬರಲು ಒಟ್ಟು 40 ಕಿಮೀ ಹೆಚ್ಚು ಓಡಾಟ ಮಾಡಬೇಕಾಗುತ್ತದೆ. ಈ ಸೇತುವೆ ನಿರ್ಮಾಣಕ್ಕೆ ಜನ ಆಗ್ರಹಿಸುತ್ತಲೇ ಬಂದಿದ್ದರು. ಮಂಗಳೂರು, ಉಡುಪಿ ಜಿಲ್ಲೆಗಳನ್ನು ಸಂಪರ್ಕಿಸುವ ಶಾಂಭವಿ ನದಿಗೆ ಕಟ್ಟಲಾಗಿರುವ ಪಲಿಮಾರು ಸೇತುವೆ ರೂ. 25 ಕೋಟಿ  ವೆಚ್ಚದಲ್ಲಿ ಪುನರ್‌ನಿರ್ಮಾಣವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಮರವೂರು ಸೇತುವೆ

ಮಂಗಳೂರಿಗೆ ಸಂಪರ್ಕಕಲ್ಪಿಸುವ ಮರವೂರಿನಲ್ಲಿರುವ ಸೇತುವೆ ಕುಸಿದ ಕಾರಣ ಸುಮಾರು ಒಂದು ವರ್ಷದಿಂದ ಹೊಸ ಸೇತುವೆಯ ಮೂಲಕ ವಾಹನಗಳು ಸಂಚರಿಸುತ್ತಿವೆ. ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾಗೂ ಬಜಪೆ ಕಟೀಲಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು. ಇಲ್ಲೂ ವಾಹನಗಳ ಓಡಾಟ ಹೆಚ್ಚಿರುವುದರಿಂದ ಕುಸಿದಿರುವ ಸೇತುವೆಯ ಪುನರ್ ನಿರ್ಮಾಣ ಆಗತ್ಯವಿದೆ. ಇದಕ್ಕಾಗಿ ರೂ. 40 ಕೋಟಿ ವೆಚ್ಚದಲ್ಲಿ ಮರವೂರು ಹಳೆಯ ಸೇತುವೆ ಪುನರ್ ನಿರ್ಮಾಣವಾಗಲಿದೆ. ಈ ಮೂರೂ ಸೇತುವೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರ ಸಹಕಾರ ನೀಡಿದ್ದಾರೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article