ಶೂಟೌಟ್ ಪ್ರಕರಣ: ಕೊಲೆಗಡುಕನ ಬಂಧನ
ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ, ಪ್ರಸ್ತುತ ಕುಂದಾಪುರದ ಫ್ಲ್ಯಾಟ್‌ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ.
ಹೆಬ್ರಿ ಮೂಲದ, ಈಗ ಬಾರ್ಕೂರು ಕಚ್ಚೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಎನ್ನುವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಡೆರಿಕ್ ತಲೆಮರೆಸಿಕೊಂಡಿದ್ದ.
ಪ್ರಾಥಮಿಕ ತನಿಖೆಯ ಪ್ರಕಾರ, ಜುಲೈ 30ರಂದು ರಾತ್ರಿ ಸುಮಾರು 11.45ಕ್ಕೆ ಡೆರಿಕ್ ಕ್ರಾಸ್ತಾ ಐವನ್ ರಿಚರ್ಡ್ ಅವರಿಗೆ ಕರೆ ಮಾಡಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಬಾಕಿ ಹಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಮಾತನಾಡಿದ್ದಾರೆ. ಈ ವೇಳೆ ಇಬ್ಬರ ನಡುವಿನ ಮಾತುಕತೆ ತೀವ್ರ ವಾಗ್ವಾದಕ್ಕೆ ತಿರುಗಿ, ‘ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ’ ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಜುಲೈ ೩೧ರಂದು ರಾತ್ರಿ ಸುಮಾರು 1.30ಕ್ಕೆ ಡೆರಿಕ್ ತನ್ನ ಲೊಕೇಶನ್ ಅನ್ನು ಐವನ್‌ಗೆ ಕಳುಹಿಸಿದ್ದಾನೆ.
ಬಳಿಕ ಚರ್ಚ್ ರಸ್ತೆಯ ಹೋಲಿ ರೋಸಾರಿಯೋ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯಲ್ಲಿ ಐವನ್ ಕಾರಿನಲ್ಲಿ ಕಾಯುತ್ತಿದ್ದ ವೇಳೆ, ಬೆಳಗಿನ ಜಾವ ಸುಮಾರು 3.15ಕ್ಕೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಸ್ಥಳಕ್ಕೆ ಬಂದ ಡೆರಿಕ್, ಕಾರಿನಿಂದ ಇಳಿದು ತನ್ನ ಬಳಿ ಇದ್ದ ಗನ್‌ನಿಂದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಭಟ್ಕಳದ ಬೆಳಕೆ ಹೇರಬುಡಿಕೆ ಎಂಬಲ್ಲಿ ಶನಿವಾರ ಈತನನ್ನು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ತನಿಖೆ ಮುಂದುವರಿದಿದೆ.