ತಾಲೂಕಿನಾದ್ಯಂತ ಭಾರೀ ಮಳೆ: ಉಪ್ಪಿನಂಗಡಿ ಸಂಗಮತಾಣದಲ್ಲಿ ಜಲರಾಶಿ
ಮಳೆಗಾಲದ ಆರಂಭದಲ್ಲಿ ಮಳೆ ಕೊರತೆ ಎದುರಿಸುತ್ತಿದ್ದ ಜನರು ಈ ಮಳೆಯ ಅಬ್ಬರದಿಂದ ನೆರೆಭೀತಿಯ ಆತಂಕಕ್ಕೆ ಒಳಗಾಗಿದ್ದಾರೆ.
ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಸಂಗಮ ಸ್ಥಳದಲ್ಲಿ ನೂರಾರು ಮಂದಿ ಜಲರಾಶಿಯ ನೆರೆವೀಕ್ಷಣೆಯಲ್ಲಿ ತೊಡಗಿದ್ದು, ಅಪಾಯದ ಮಟ್ಟದತ್ತ ನೆರೆನೀರು ಏರಿಕೆಯಾಗುತ್ತಿದೆ. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಪಡ್ಪು ಎಂಬಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಜಲಾವೃತಗೊಂಡಿದೆ. ಇಲ್ಲಿ ವಾಹನಸಂಚಾರಕ್ಕೆ ತಡೆ ಉಂಟಾಗಿದೆ. ತಾಲೂಕಿನ ಹಳ್ಳ, ತೊರೆ, ತೋಡುಗಳು ಉಕ್ಕಿ ಹರಿಯಲಾರಂಭಿಸಿವೆ. ಶನಿವಾರ ಇಡೀ ದಿನ ಸೂರ್ಯ ಕಾಣದಂತೆ ಆಕಾಶ ಸಂಪೂರ್ಣ ಮೋಡ ಮುಸುಕಿ ಕತ್ತಲೆಯ ವಾತಾವರಣ ಸೃಷ್ಟಿಯಾಗಿತ್ತು. ಈ ಬಾರಿಯ ಮಳೆಗಾಲದುದ್ದಕ್ಕೂ ಮಳೆಯಬ್ಬರ ನೋಡದಿದ್ದ ಜನತೆಗೆ ಮೊದಲ ಬಾರಿಗೆ ಈ ಬಾರಿಯ ಮಳೆಗಾಲದ ಅನುಭವವಾಗುತ್ತಿದೆ. ಜತೆಗ ಅನಾಹುತಗಳ ಆತಂಕವೂ ಉಂಟಾಗಿದೆ.
ಮೈದುಂಬಿದ ಜೀವನದಿಗಳು...:
ಈ ಬಾರಿ ಮಳೆಯ ಕೊರತೆಯಿಂದ ಜೀವನದಿಗಳಾದ ಕುಮಾರಧಾರಾ-ನೇತ್ರಾವತಿ ನದಿಗಳು ತುಂಬಿರಲಿಲ್ಲ. ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಜೀವನದಿಗಳಲ್ಲಿ ನೆರೆಪ್ರವಾಹ ಉಂಟಾಗುತ್ತಿತ್ತು. ತಿಂಗಳುಗಟ್ಟಲೆ ಸಮಯದಲ್ಲಿ ಈ ಎರಡೂ ನದಿಗಳಲ್ಲಿ ನೆರೆ ನೀರಿನ ಪ್ರವಾಹ ನಿರಂತರವಾಗಿರುತ್ತಿತ್ತು. ನದಿ ದಂಡೆಗಳ ಪಕ್ಕದಲ್ಲಿರುವ ಅಡಿಕೆ ತೋಟಗಳು ಭತ್ತದ ಗದ್ದೆಗಳು ನೀರಪ್ರವಾಹಕ್ಕೆ ಈಡಾಗುತ್ತಿದ್ದವು. ಆದರೆ ಇಂತಹ ಸ್ಥಿತಿ ಈ ಮಳೆಗಾಲದಲ್ಲಿ ಕಂಡುಬರಲಿಲ್ಲ. ಇದೀಗ ಮೊದಲ ಬಾರಿಗೆ ಈ ಜೀವನದಿಗಳು ಮೈದುಂಬಿ ಹರಿಯುತ್ತಿವೆ. ಎರಡೂ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಕುಮಾರಧಾರ-ನೇತ್ರಾವತಿ ನದಿಗಳ ನೀರು ಅಪಾಯದ ಮಟ್ಟದತ್ತ ಸಾಗಿದೆ. ಇದರಿಂದ ನೆರೆ ಪ್ರವಾಹದ ಭೀತಿಯೂ ಉಂಟಾಗಿದೆ.