ಆ.16-18: ಸಾಹಿತ್ಯ ಕೇಂದ್ರದಿಂದ ಮೂರು ದಿನಗಳ ಪುಸ್ತಕ ಹಬ್ಬ-2026
ಮಂಗಳೂರು: ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ಆ. 16ರಿಂದ 18ರವರೆಗೆ ಮೂರು ದಿನಗಳ ಕಾಲ ನಗರದ ಸಂಘನಿಕೇತನದ ಸಭಾಂಗಣದಲ್ಲಿ ಪುಸ್ತಕ ಹಬ್ಬ-2026 ಆಯೋಜಿಸಲಾಗಿದೆ.
ಮಂಗಳೂರಿನ ಜನತೆಯಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವುದು ಹಾಗೂ ಯುವಜನರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆ. 16ರಂದು ಬೆಳಿಗ್ಗೆ 10ಕ್ಕೆ ಲೇಖಕ, ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಕಾರ್ಯಕ್ರಮವನ್ನು ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಕಲಾನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಅತಿಥಿಯಾಗಿ ಭಾಗವಹಿಸುವರು ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 11.45ಕ್ಕೆ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ರಿಂದ ವಿದ್ವಾನ್ ಮಹೇಶ್ ಪದ್ಯಾಣ ಮತ್ತು ಬಳಗದಿಂದದಿಂದ ಶಾಸ್ತ್ರೀಯ ಸುಗಮ ಸಂಗೀತ, 3.30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಸಂಜೆ 5.30ರಿಂದ ಎಸ್ಡಿಎಂ ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಬೇಂದ್ರೆ ಅಂದ್ರೆ’ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಆ. 17ರಂದು ಬೆಳಗ್ಗೆ 10ರಿಂದ ಕಲಾಭಿ ಥಿಯೇಟರ್ ಎಕ್ಸ್ಪ್ರೆಸ್ ಪ್ರಸ್ತುತಿಯಲ್ಲಿ ಅಜ್ಜಿ ಕಥೆಗಳು, ಮಧ್ಯಾಹ್ನ 2ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ‘ಸಿಂಧೂರ ಸಂಗ್ರಾಮ’ ಯಕ್ಷಗಾನ ಪ್ರದರ್ಶನ, ಸಂಜೆ 5ರಿಂದ ನಾಡಿನ ಖ್ಯಾತ ಅರ್ಥಧಾರಿಗಳಿಂದ ‘ಶ್ರವಣ ಭಕ್ತ ಪರೀಕ್ಷಿತ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಆ.18ರಂದು ಬೆಳಗ್ಗೆ 10.30ರಿಂದ ಡಾ.ಪಾದೇಕಲ್ಲು ವಿಷ್ಣು ಭಟ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಕಥನ ವಿಚಾರಗೋಷ್ಠಿ ನಡೆಯಲಿದ್ದು, ಭಾರತೀಯ ಮಹಾಕಾವ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಬಗ್ಗೆ ಡಾ. ವೀಣಾ ಬನ್ನಂಜೆ, ಪ್ರಾಚೀನ ತುಳು ಕಾವ್ಯ ಪರಂಪರೆ ಮತ್ತು ಆಧುನಿಕ ತುಳು ಸಾಹಿತ್ಯ ಕುರಿತು ಶ್ರೀಕಾಂತ್ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2ರಿಂದ ‘ಮೊಬೈಲ್ ಯುಗದಲ್ಲಿ ಪುಸ್ತಕ’ ಬಗ್ಗೆ ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ವಿಜೇತ್ ಶೆಟ್ಟಿ ಮಂಜನಾಡಿ, ಪೂರ್ಣಿಮಾ ಕೆ.ಎಂ., ಧಾರಿಣಿ ಎಸ್. ಕುಲಕರ್ಣಿ, ರಂಗನಾಥ ಚಿತ್ರದುರ್ಗ ವಿಚಾರ ಮಂಡಿಸಲಿದ್ದು, ವಿಕಾಸ್ರಾಜ್ ಪೆರುವಾಯಿ ಸಮನ್ವಯಕಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಬೈ ವಿವಿ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ ಅವರು ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣ ಪ್ರಸಾದ್ ಬದಿ ಸಮಾರೋಪ ಭಾಷಣ ಮಾಡುವರು. ಸಂಜೆ 6 ರಿಂದ ಕಲಾಭಿ ಥಿಯೇಟರ್ ಪ್ರಸ್ತುತಿಯಲ್ಲಿ ಮಾರಿ ಕಾಡು ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಒಂದು ಲಕ್ಷ ಪ್ರಸ್ತಕಗಳ ಪ್ರದರ್ಶನ..
ಪುಸ್ತಕ ಹಬ್ಬದಲ್ಲಿ ಒಂದು ಲಕ್ಷ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾತ್ರವಲ್ಲದೆ ರಾಜ್ಯದಾದ್ಯಂತ ಪ್ರಸಿದ್ಧ ಕವಿಗಳು ಮತ್ತು ಖ್ಯಾತ ಬರಹಗಾರರನ್ನು ಭೇಟಿ ಮಾಡುವ ಅವಕಾಶ ಲಭಿಸಲಿದೆ. ಜೊತೆಗೆ ಮಕ್ಕಳಿಗೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸಲಾಗಿದೆ. ಪ್ರತಿದಿನ ಸುಮಾರು 2,500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ದಿನಕರ ಇಂದಾಜೆಗೆ ಪ್ರಶಸ್ತಿ..
ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ಕೊಡುಗೆಗಳನ್ನು ನೀಡಿದ ಹೊಸ ದಿಗಂತ ಸಹ ಸಂಪಾದಕ ದಿನಕರ್ ಇಂದಾಜೆ, ಪಾಂಗಾಳ ಬಾಬು ಕೊರಗ ಅವರಿಗೆ ಹಾಗೂ ಕಾಂತಾವರ ಕನ್ನಡ ಸಂಘಕ್ಕೆ ಪುಸ್ತಕ ಹಬ್ಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಲತೇಶ್ ಮಾಹಿತಿ ನೀಡಿದರು.
ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಗಜಾನನ ಪೈ, ಸಾಹಿತ್ಯ ಕೇಂದ್ರ ಟ್ರಸ್ಟಿಗಳಾದ ಪ್ರಕಾಶ್ ಪೈ, ಅರವಿಂದ ಬಿಜೂರು, ಸಾಹಿತ್ಯ ಕೇಂದ್ರ ಮ್ಯಾನೇಜರ್ ಕೆ. ರತ್ನಾಕರ ಕುಳಾಯಿ ಉಪಸ್ಥಿತರಿದ್ದರು.