ಕಾರ್ಮಿಕರ ಬೇಡಿಕೆ ಈಡೇರಿಸಲು ಆ.18ರಂದು ಪ್ರತಿಭಟನೆ

ಕಾರ್ಮಿಕರ ಬೇಡಿಕೆ ಈಡೇರಿಸಲು ಆ.18ರಂದು ಪ್ರತಿಭಟನೆ

ಮಂಗಳೂರು: ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹಾಗೂ ರಾಷ್ಟ್ರ ಮಟ್ಟದ 11 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಭಾರತೀಯ ಮಜ್ದೂರು ಸಂಘ (ಬಿಎಂಎಸ್) ನೇತೃತ್ವದಲ್ಲಿ ದೇಶವ್ಯಾಪಿ ನಡೆಸಲಾಗುವ ಪ್ರತಿಭಟನೆಯ ಅಂಗವಾಗಿ ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆ.18ರಂದು ಬೆಳಗ್ಗೆ 11 ಗಂಟೆಗೆ ನಗರದ ಪುರಭವನ ಮುಂಭಾಗ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ಬಿಎಂಎಸ್ನಿಂದ ಆ.17ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಅಂದು ನಾಗರ ಪಂಚಮಿ ಆಚರಣೆ ಇರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಆ.18ರಂದು ನಡೆಸಲಾಗುತ್ತದೆ. ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ, ಉದ್ಯೋಗ ಭದ್ರತೆ, ಗೌರವಯುತ ಜೀವನ ಹಾಗೂ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ  ನಡೆಯಲಿದೆ ಎಂದು ಬಿಎಂಎಸ್ ದ.ಕ. ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಮಟ್ಟದ 11 ಪ್ರಮುಖ ಬೇಡಿಕೆಗಳಾದ ಇಎಸ್‌ಐಸಿ ವೇತನ ಮಿತಿಯನ್ನು 42 ಸಾವಿರ ರೂ.ಗೆ ಹೆಚ್ಚಿಸಬೇಕು, ಇಪಿಎಸ್-95 ಕನಿಷ್ಠ ಪಿಂಚಣಿ 7,500 ರೂ.ಗೆ ಹೆಚ್ಚಿಸಬೇಕು, ಇಪಿಎಫ್ ವೇತನ ಮಿತಿ 30 ಸಾವಿರ ರೂ.ಗೆ ಹೆಚ್ಚಿಸಬೇಕು, ಬೋನಸ್ ಲೆಕ್ಕಾಚಾರದ ವೇತನ ಮಿತಿ 18 ಸಾವಿರ ರೂ.ಗೆ ಹೆಚ್ಚಿಸಬೇಕು, ಬೋನಸ್ ಅರ್ಹತಾ ವೇತನ ಮಿತಿ 42 ಸಾವಿರ ರೂ.ಗೆ ಹೆಚ್ಚಿಸಬೇಕು, ಆಶಾ, ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವಧನ ಹೆಚ್ಚಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು, ಶ್ರಮ ಸಂಹಿತೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು, ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೊಳಿಸಬೇಕು, ಗ್ರಾಚ್ಯುಟಿ ಗರಿಷ್ಠ ಮಿತಿ 40 ಲಕ್ಷ ರೂ.ಗೆ ಹೆಚ್ಚಿಸಬೇಕು, ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನ 30,000 ರೂ..ಗೆ ನಿಗದಿಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಹೋರಾಟ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ನಮ್ಮ ಬೇಡಿಕೆಗಳ ಕುರಿತು ತಕ್ಷಣ ಸ್ಪಷ್ಟ ಮತ್ತು ಕಾಲಮಿತಿಯೊಳಗಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬಿಎಂಎಸ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಜಿಲ್ಲಾ ಉಪಾಧ್ಯಕ್ಷೆ ಗೀತಾ ಧರ್ಮರಾಜ್, ಕೋಶಾಧಿಕಾರಿ ಉದಯಕುಮಾರ್ ಬಿ.ಸಿ., ಜಿಲ್ಲಾ ಬೀಡಿ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ನಳಿನಿ ಅಡ್ಯಾರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article