ಆ.16 ರಂದು ಪಿಲಿಕುಳದಲ್ಲಿ ‘ಆಟಿಕೂಟ’

ಆ.16 ರಂದು ಪಿಲಿಕುಳದಲ್ಲಿ ‘ಆಟಿಕೂಟ’

ಮಂಗಳೂರು: ತುಳುನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಜನಪದ ಆಚರಣೆಗಳು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪಿಲಿಕುಳ ಸಂಸ್ಕೃತಿ ಗ್ರಾಮದ ಗುತ್ತು ಮನೆಯಲ್ಲಿ ಆ.೧೬ರಂದು ಸಾಂಪ್ರದಾಯಿಕ ‘ಆಟಿಕೂಟ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಽಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.

ಆಟಿಕೂಟ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಉಡುಪಿ ಜಿಲ್ಲೆ ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ಗುರು ಮಾರುತಿ ಹೌಂದೇರಾಯನ ಜನಪದ ನೃತ್ಯ ತಂಡ ಇವರಿಂದ, ನಶಿಸಿಹೋಗುತ್ತಿರುವ ವಿಶೇಷ ಜಾನಪದ ನೃತ್ಯ ಹೌಂದೇರಾಯನ ಓಲಗವನ್ನು ಪ್ರಸ್ತುತಪಡಿಸಲಾಗುವುದು. ಜನಪದ ಕಲೆ, ಆಚರಣೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ವಿಶೇಷ ಜಾನಪದ ನೃತ್ಯ ರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ. ಆಟಿ ಕೂಟದಲ್ಲಿ ಆಟಿತಿಂಗಳ 32 ಬಗೆಯ ಖಾದ್ಯಗಳನ್ನು ಒಳಗೊಂಡಿರುವ ಭೋಜನ ಉಣಬಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. 

ಸ್ಥಳೀಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸುವುದು ಪಿಲಿಕುಳ ಅಭಿವೃದ್ಧಿ ಪ್ರಾಽಕಾರದ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ಆಟಿಕೂಟ ಕಾರ್ಯಕ್ರಮವು ತುಳುನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನತೆ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವ ಮಹತ್ವದ ವೇದಿಕೆಯಾಗಿದೆ ಎಂದರು.

ಪಿಲಿಕುಳ ಸಂಸ್ಕೃತಿ ಗ್ರಾಮವು ಮರೆಯಾಗುತ್ತಿರುವ ಗ್ರಾಮೀಣ ಜೀವನಶೈಲಿ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ನೆನಪುಗಳನ್ನು ಪುನರುಜೀವನಗೊಳಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಇಲ್ಲಿ ಬೃಹತ್ ಗಾತ್ರದ ಗುತ್ತು ಮನೆ, ಕಂಬಳದ ಕರೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಗದ್ದೆಗಳು, ಅಡಿಕೆ ತೋಟ ಹಾಗೂ ದನದ ಹಟ್ಟಿ ಸೇರಿದಂತೆ ಗ್ರಾಮೀಣ ಬದುಕಿನ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಗುತ್ತು ಮನೆಯೊಳಗೆ ಕರಾವಳಿ ಪ್ರದೇಶದ ವಿಶಿಷ್ಟ ಪರಿಕರಗಳು ಹಾಗೂ ಜಾನಪದ ವಸ್ತುಗಳನ್ನು ಒಳಗೊಂಡ ವಸ್ತುಸಂಗ್ರಹಾಲಯವೂ ಇದೆ ಎಂದರು.

ಆಡಳಿತಾಧಿಕಾರಿ ಅಶೋಕ್ ಆರ್., ಉಪ ಸಮಿತಿ ಅಧ್ಯಕ್ಷ ಡಾ. ಶ್ರೀನಿಕೇತನ, ಪ್ರಮುಖರಾದ ರಾಮಕೃಷ್ಣ, ನಿತಿನ್ ಬಾಳೆಪುಣಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article