ಮೆಸ್ಕಾಂಗೆ 395 ಹೊಸ ಪವರ್‌ಮ್ಯಾನ್‌ಗಳ ನೇಮಕ: ಕೆ. ಹರೀಶ್ ಕುಮಾರ್

ಮೆಸ್ಕಾಂಗೆ 395 ಹೊಸ ಪವರ್‌ಮ್ಯಾನ್‌ಗಳ ನೇಮಕ: ಕೆ. ಹರೀಶ್ ಕುಮಾರ್


ಮಂಗಳೂರು: ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

430 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಿನ್ನೆ ಹಾಗೂ ಇಂದು 395 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 28.10 ಲಕ್ಷ ವಿದ್ಯುತ್ ಸಂಪರ್ಕಗಳು ಇದ್ದು, ಮನೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನೀರಾವರಿ ಪಂಪ್‌ಸೆಟ್‌ಗಳು ಇದರ ವ್ಯಾಪ್ತಿಗೆ ಬರುತ್ತವೆ. ಸುಮಾರು 97 ಸಾವಿರ ಕಿ.ಮೀ. ಕಡಿಮೆ ಒತ್ತಡದ ಹಾಗೂ 59 ಸಾವಿರ ಕಿ.ಮೀ. 11 ಕೆವಿ ಉನ್ನತ ಒತ್ತಡದ ವಿದ್ಯುತ್ ಮಾರ್ಗಗಳ ನಿರ್ವಹಣೆಗೆ ಸಿಬ್ಬಂದಿ ಅಗತ್ಯವಿದೆ. ಹೊಸ ನೇಮಕಾತಿಯಿಂದ ಸಿಬ್ಬಂದಿ ಕೊರತೆ ಕಡಿಮೆಯಾಗಲಿದೆ. ಇನ್ನೂ ಸುಮಾರು 35 ಪವರ್‌ಮ್ಯಾನ್‌ಗಳ ಕೊರತೆಯಿದ್ದು, ಹೆಚ್ಚುವರಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಹೇಳಿದರು.

ಭೂಗತ ಕೇಬಲ್, ಲಿಂಕ್‌ಲೈನ್‌ಗೆ ಒತ್ತು:

ಮಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜನ್ನು ಹೆಚ್ಚು ಸುರಕ್ಷಿತ ಹಾಗೂ ನಿರಂತರಗೊಳಿಸಲು ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಮತ್ತು ಲಿಂಕ್‌ಲೈನ್ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಭೂಗತ ಕೇಬಲ್‌ನಿಂದ ಅಪಘಾತಗಳ ಸಾಧ್ಯತೆ ಹಾಗೂ ಪ್ರಸರಣ ನಷ್ಟ ಕಡಿಮೆಯಾಗಲಿದೆ. ಒಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದರೂ ಪರ್ಯಾಯ ಮಾರ್ಗದ ಮೂಲಕ ಸರಬರಾಜು ಮುಂದುವರಿಸಲು ಲಿಂಕ್‌ಲೈನ್ ನೆರವಾಗಲಿದೆ.

ವಿದ್ಯುತ್ ಸುರಕ್ಷತೆಗಾಗಿ ಸುಮಾರು 5,270 ದ್ವಿಮುಖ ಕಟ್‌ಔಟ್‌ಗಳನ್ನು ಅಳವಡಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ. ಇದರಿಂದ ಫ್ಯೂಸ್ ಸಮಸ್ಯೆಯಿಂದ ಮನೆಗಳ ವಿದ್ಯುತ್ ಉಪಕರಣಗಳಿಗೆ ಉಂಟಾಗುವ ಹಾನಿಯನ್ನು ತಡೆಯಲು ಸಾಧ್ಯವಾಗಲಿದೆ ಎಂದರು.

ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ:

ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗುತ್ತಿದ್ದು, ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಳಕೆ, ದೈನಂದಿನ ಬಳಕೆಯ ಪ್ರಮಾಣ ಹಾಗೂ ಬಿಲ್ ವಿವರಗಳನ್ನು ಪರಿಶೀಲಿಸಬಹುದು.

ಬಿಲ್ ಉತ್ಪತ್ತಿಯಾಗದಿದ್ದರೂ ಆ್ಯಪ್ ಮೂಲಕ ಬಿಲ್ ಮಾಹಿತಿ ಪಡೆದು ಪಾವತಿಸಲು ಅವಕಾಶವಿದೆ. ಸ್ಮಾರ್ಟ್ ಮೀಟರ್‌ಗಳ ಗುಣಮಟ್ಟ ಪರಿಶೀಲನೆಗಾಗಿ ನಾಲ್ಕು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸ್ಮಾರ್ಟ್ ಮೀಟರ್ ವ್ಯವಸ್ಥೆಯಿಂದ ವಿದ್ಯುತ್ ಬಳಕೆಯ ನಿಖರ ಮಾಹಿತಿ ದೊರೆಯುವುದರ ಜೊತೆಗೆ ಸರಬರಾಜು ವ್ಯವಸ್ಥೆಯ ನಿರ್ವಹಣೆಯೂ ಸುಧಾರಿಸಲಿದೆ ಎಂದು ಕೆ. ಹರೀಶ್ ಕುಮಾರ್ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article