ಬಂದಾರು ಹಾಗೂ ಮುಂಡಾಜೆಯಲ್ಲಿ ಕಾಡಾನೆ ಹಾವಳಿ
Sunday, August 30, 2026
ಉಜಿರೆ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕರ್ಲೋಡಿ ಹಾಗೂ ಮುಂಡಾಜೆ ಗ್ರಾಮದ ಕುಳೆಂಜಿರೋಡಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಬೆಳೆಗಳನ್ನು ನಾಶಪಡಿಸಿದ ಘಟನೆ ನಡೆದಿದೆ.
ಕಾಡಾನೆಗಳು ತಡರಾತ್ರಿ ಗ್ರಾಮಗಳ ನಾನಾ ಭಾಗಗಳಲ್ಲಿ ಸಂಚರಿಸಿದ್ದು, ಕೃಷಿಕರ ತೋಟಗಳಿಗೆ ನುಗ್ಗಿ ಅಡಕೆ, ಬಾಳೆ, ತೆಂಗು ಸೇರಿದಂತೆ ಕೃಷಿ ಬೆಳೆಗಳನ್ನು ತುಳಿದು ಹಾಗೂ ತಿಂದು ಹಾನಿಗೊಳಿಸಿವೆ.
ಮುಂಡಾಜೆ ಕುಳೆಂಜಿರೋಡಿಯಲ್ಲಿ ಮಹೇಂದ್ರ ಪರಾಂಜಪೆ ಎಂಬವರ ತೋಟದಲ್ಲಿ ಕಳೆದ ವಾರ ಕೂಡ ಕಾಡಾನೆಗಳು ದಾಳಿ ನಡೆಸಿ ಕೃಷಿಹಾನಿ ಉಂಟುಮಾಡಿದ್ದವು. ಶನಿವಾರ ತಡರಾತ್ರಿ ಮತ್ತೆ ತೋಟಕ್ಕೆ ಲಗ್ಗೆ ಇಟ್ಟಿವೆ. ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವುದು, ಮನೆಗಳ ಹತ್ತಿರದವರೆಗೂ ಸಂಚಾರ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.