ಡಿವೈಡರ್ ಏರಿದ ಬಸ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಡಿವೈಡರ್ ಏರಿದ ಬಸ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಉಜಿರೆ: ಬೆಳ್ತಂಗಡಿ-ಉಜಿರೆ ರಸ್ತೆಯ ಕೆಳಗಿನ ಪೆಟ್ರೋಲ್ ಬಂಕ್ ಸಮೀಪ ಶನಿವಾರ ಸಂಜೆ ಬಸ್ಸೊಂದು ಏಕಾಏಕಿ ಡಿವೈಡರ್ ಏರಿದ ಘಟನೆ ಸಂಭವಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದೆ.

ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಬ್ರೇಕ್ ವೈಫಲ್ಯಕ್ಕೊಳಗಾದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ವೇಳೆ ಬಸ್‌ನ ಮುಂಭಾಗದಲ್ಲಿ ಇತರ ವಾಹನಗಳು ಸಂಚರಿಸುತ್ತಿದ್ದವು. ಅಪಾಯದ ಪರಿಸ್ಥಿತಿಯನ್ನು ಗಮನಿಸಿದ ಚಾಲಕ ತಕ್ಷಣವೇ ಬಸ್ಸನ್ನು ಡಿವೈಡರ್ ನತ್ತ ತಿರುಗಿಸಿ ಅದರ ಮೇಲೆ ಹತ್ತಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮವಾಗಿ ಮುಂಭಾಗದಲ್ಲಿದ್ದ ವಾಹನಗಳಿಗೆ ಢಿಕ್ಕಿಯಾಗುವ ಸಾಧ್ಯತೆ ತಪ್ಪಿದ್ದು, ಪ್ರಯಾಣಿಕರು ಹಾಗೂ ಇತರ ವಾಹನ ಸವಾರರು ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.

ಬಸ್ ಡಿವೈಡರ್ ಏರಿದ ಪರಿಣಾಮ ಕೆಲಕಾಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಬಸ್ಸನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಭಾಗದಲ್ಲಿ ನಡೆಯುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಅರ್ಧಂಬರ್ಧ ಸ್ಥಿತಿಯಲ್ಲಿರುವುದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಿದೆ. ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ವಿನ್ಯಾಸದಲ್ಲಿ ಆಗಿರುವ ಬದಲಾವಣೆಗಳು, ಡಿವೈಡರ್‌ಗಳ ವ್ಯವಸ್ಥೆ, ಸೂಕ್ತ ಸೂಚನಾ ಫಲಕಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ವಾಹನ ಸಂಚಾರದಲ್ಲಿ ಗೊಂದಲ ಉಂಟಾಗುತ್ತಿದೆ.

ವಿಶೇಷವಾಗಿ ಪೀಕ್ ಅವಧಿಯಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ತಾಂತ್ರಿಕ ದೋಷ ಅಥವಾ ಬ್ರೇಕ್ ವೈಫಲ್ಯದಂತಹ ತುರ್ತು ಪರಿಸ್ಥಿತಿ ಎದುರಾದರೆ ವಾಹನವನ್ನು ಸುರಕ್ಷಿತವಾಗಿ ನಿಯಂತ್ರಿಸುವುದು ಚಾಲಕರಿಗೆ ದೊಡ್ಡ ಸವಾಲಾಗಿದೆ. ಈ ಘಟನೆಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದರೂ, ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಡಿವೈಡರ್‌ಗಳಿಗೆ ಸಮರ್ಪಕ ಪ್ರತಿಫಲಕ ಅಳವಡಿಸುವುದು, ರಾತ್ರಿ ವೇಳೆ ಸ್ಪಷ್ಟವಾಗಿ ಗೋಚರಿಸುವಂತೆ ಸೂಚನಾ ವ್ಯವಸ್ಥೆ ಕಲ್ಪಿಸುವುದು ಹಾಗೂ ಕಾಮಗಾರಿ ಪ್ರದೇಶವನ್ನು ವೈಜ್ಞಾನಿಕವಾಗಿ ನಿರ್ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article