ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಟ್ಟುಬಿಟ್ಟು ಸುರಿದ ಸಾಧಾರಣ ಮಳೆ: ಮುಂಬರುವ ದಿನಗಳಲ್ಲಿ ತಗ್ಗಲಿದೆ ತೀವ್ರತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಬಿಟ್ಟುಬಿಟ್ಟು ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಬೆಳಗಿನ ಜಾವ ಮೋಡ ಮತ್ತು ಬಿಸಿಲಿನಿಂದ ಆರಂಭವಾದ ವಾತಾವರಣ, ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಸೂರ್ಯನ ಪ್ರಖರ ದರ್ಶನದಿಂದ ಬಿಸಿಲು ಹೆಚ್ಚಿದ್ದು, ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಗುರುವಾರ ಅಲ್ಪ ಮಳೆಯಾಗಿದೆ. ಮಂಗಳೂರು ನಗರದ ಸುತ್ತಮುತ್ತ ಬಿಸಿಲು ಜಾಸ್ತಿಯಿದ್ದು ಸಾಧಾರಣ ಮಳೆಯಾಗಿದೆ. ಶುಕ್ರವಾರ ಕಾಸರಗೋಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮೋಡ, ಬಿಸಿಲಿನ ಜೊತೆಗೆ ದಿನದಲ್ಲಿ ಎರಡ್ಮೂರು ಬಾರಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ.
ಕಡಬದಲ್ಲಿ ಅತೀ ಹೆಚ್ಚು ಮಳೆ:
ಸುಳ್ಯ ತಾಲೂಕು ಮತ್ತು ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ಒಂದೆರಡು ಕಡೆ ಮಳೆ ಹೆಚ್ಚಿರಬಹುದು. ಪ್ರಸ್ತುತ ಮುನ್ಸೂಚನೆಯಂತೆ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 23.1 ಮಿ.ಮೀ ಮಳೆ ದಾಖಲಾಗಿದ್ದು, ಕಡಬದಲ್ಲಿ ಗರಿಷ್ಠ 33.1 ಮಿ.ಮೀ ಮಳೆಯಾಗಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಪಶ್ಚಿಮ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆ ಪ್ರಮಾಣ ತುಸು ಹೆಚ್ಚಿರಲಿದೆ.
ಮಧ್ಯಪ್ರದೇಶ ಹಾಗೂ ಬಾಂಗ್ಲಾದೇಶ ಕರಾವಳಿಯ ಚಂಡಮಾರುತದ ಸುಳಿಗಾಳಿ (ತಿರುವಿಕೆ) ಮುಂಗಾರಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಮಾರುತಗಳು ಪೆಸಿಫಿಕ್ ಸಾಗರದತ್ತ ಸಾಗುತ್ತಿರುವುದರಿಂದ ಮುಂದಿನ 10 ದಿನ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸಾಧ್ಯತೆ ಕಡಿಮೆ ಇದ್ದು, ರಾಜ್ಯದಲ್ಲಿ ಸಾಮಾನ್ಯ ಮಳೆ ಮುಂದುವರಿಯಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.